ಸಂತೋಷ್ ಸಾವಿನ ಸಂಪೂರ್ಣ ತನಿಖೆ ನಿಷ್ಪಕ್ಷಪಾತವಾಗಿ ಆಗಲಿದೆ : ಮುಖ್ಯಮಂತ್ರಿ ಬೊಮ್ಮಾಯಿ
ಮಂಗಳೂರು ಎ.12 : ಡೆತ್ ನೋಟ್ ಬರೆದಿಟ್ಟು ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಾವಿನ ಸಂಪೂರ್ಣ ತನಿಖೆ ನಿಷ್ಪಕ್ಷಪಾತವಾಗಿ ಆಗಲಿದೆ. ತನಿಖೆಯ ಬಳಿಕ ಸತ್ಯ ಹೊರಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಂತೋಷ್ ಪಾಟೀಲ್ ಉಡುಪಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಪ್ರಾಥಮಿಕ ತನಿಖೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮಂಗಳೂರಿನಿಂದ ಎಫ್ಎಸ್ಎಲ್ ಅಧಿಕಾರಿಗಳು ಹೋಗಲು ಸೂಚಿಸಲಾಗಿದೆ. ಈ ಸಾವಿನ ಸಂಪೂರ್ಣ ತನಿಖೆ ನಿಷ್ಪಕ್ಷಪಾತವಾಗಿ ಆಗಲಿದೆ. ತನಿಖೆಯ ಬಳಿಕ ಸತ್ಯ ಹೊರಬರಲಿದೆ ಎಂದು ಹೇಳಿದರು.
ಆತ್ಮಹತ್ಯೆ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಅಲ್ಲಿನ ತನಿಖೆ ಕಾನೂನು ಬದ್ಧವಾಗಿ ನಡೆಯಬೇಕೆಂದು ಸೂಚನೆ ನೀಡಿದ್ದೇನೆ. ಈಶ್ವರಪ್ಪ ಮೇಲೆ ಮಾಡಿದ ಆರೋಪವನ್ನು ಅಲ್ಲಗಳೆದಿದ್ದಾರೆ. ಅವರ ಮೇಲೆ ಕೋರ್ಟ್ ಕೇಸ್ ದಾಖಲಾಗಿತ್ತು. ಈ ಆರೋಪದ ಮಾಹಿತಿ ಸರಕಾರಕ್ಕೆ ನೀಡಿಲ್ಲ. ಮುಂದೆ ಎಲ್ಲಾ ಅಂಶಗಳು ತನಿಖೆ ಆಗಲಿದೆ. ಯಾವ ಸಂದರ್ಭಕ್ಕೆ ಈ ನಿರ್ಣಯ ಕೈಗೊಂಡರು ಎಂದು ತನಿಖೆಯಿಂದ ತಿಳಿಯಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.