ಸಂತೋಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆ.ಎಸ್ ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ: ಡಿ ಕೆ ಶಿವಕುಮಾರ್ ಆಗ್ರಹ
ಬೆಂಗಳೂರು ಎ.12 :ನನ್ನ ಸಾವಿಗೆ ಸಚಿವ ಕೆ.ಎಸ್ ಈಶ್ವರಪ್ಪ ಅವರು ಕಾರಣ ಎಂದು ಡೆತ್ ನೋಟ್ ಬರೆದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹ ತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ಕೂಡಲೇ ಆರೋಪ ಹೊತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು.ಕೂಡಲೇ ಆತನನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದಿದ್ದಾರೆ.
ಈ ವೇಳೆ ಆರೋಪಿ ಸಚಿವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಬೇಕು ಎಂದ ಅವರು, 40% ಕಮಿಷನ್ ಆರೋಪ ಮಾಡಿರುವುದು ನಾವ್ಯಾರೂ ಅಲ್ಲ. ಗುತ್ತಿಗೆದಾರರ ಸಂಘ, ಗುತ್ತಿಗೆದಾರರು ಹಾಗೂ ಬಿಜೆಪಿ ಕಾರ್ಯಕರ್ತರೇ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಈ ಆರೋಪ ಮಾಡಿದ್ದಾರೆ ಎಂದರು.
ಇದೇ ವೇಳೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ಯಾರ ರಕ್ಷಣೆಯನ್ನೂ ಮಾಡಬಾರದು. ಕೇವಲ ಮೌಖಿಕವಾಗಿ ತನಿಖೆ ಮಾಡುತ್ತೇವೆ, ಸತ್ಯಾಂಶ ತಿಳಿಯುತ್ತೇವೆ ಎಂದು ಕಾಲಹರಣ ಮಾಡಬಾರದು. ಕೂಡಲೇ ಎಫ್ಐಆರ್ ದಾಖಲಿಸಿ, ಈಶ್ವರಪ್ಪರನ್ನು ಬಂಧಿಸಬೇಕು. ಈ ಹಿಂದೆ ಸಚಿವರುಗಳ ವಿರುದ್ಧದ ಪ್ರಕರಣದಲ್ಲಿ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿ ಬಿ ರಿಪೋರ್ಟ್ ಹಾಕಿ ರಕ್ಷಣೆ ಮಾಡಿದ್ದು, ಈ ಪ್ರಕರಣದಲ್ಲಿ ಆ ರೀತಿ ಮಾಡಬಾರದು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಅನೇಕ ಸಚಿವರುಗಳ ರಾಜೀನಾಮೆ ಪಡೆಯಲಾಗಿದೆ. ಈಗಲೂ ಆರೋಪ ಹೊತ್ತಿರುವ ಸಚಿವನ ವಿರುದ್ದ ಪ್ರಕರಣ ದಾಖಲಿಸಿ, ಆತನನ್ನು ವಜಾಗೊಳಿಸಬೇಕು, ಬಂಧಿಸಬೇಕು ಎಂದು ಆಗ್ರಹಿಸಿದರು