ಪ್ರವಾಸಕ್ಕೆ ಹೋಗೋಣವೆಂದೇ ಉಡುಪಿಗೆ ಬಂದಿದ್ದೇವು ಸಂತೋಷ್ ಗೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಲಕ್ಷಣ ಇರಲಿಲ್ಲ:
ಉಡುಪಿ ಎ.12 (ಉಡುಪಿ ಟೈಮ್ಸ್ ವರದಿ) : ಪ್ರವಾಸಕ್ಕೆ ಹೋಗೋಣವೆಂದೇ ಉಡುಪಿಗೆ ಬಂದಿದ್ದೇವು. ಸ್ನೇಹಿತ ರೊಂದಿಗೆ ಇದ್ದ ಸಂತೋಷ್ ಅವರಲ್ಲಿ ಯಾವತ್ತು ಆತ್ಮಹತ್ಯೆ ಮಾಡಿಕೊಳ್ಳುವ ಲಕ್ಷಣವೂ ಇರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಗೆಳೆಯರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸ್ನೇಹಿತರೊಂದಿಗೆ ಬೇರೆ ಬೇರೆ ಕಡೆಗೆ ಪ್ರವಾಸ ಹೋಗುವ ಹವ್ಯಾಸ ಹೊಂದಿದ್ದ ಸಂತೋಷ್ ಪಾಟೀಲ್ ಸೋಮವಾರವೂ ತನ್ನ ಇಬ್ಬರು ಆತ್ಮೀಯರೊಡನೆ ಉಡುಪಿಗೆ ಬಂದಿದ್ದರು.
ಸೋಮವಾರ ಸಂಜೆ 5 ಗಂಟೆಗೆ ಉಡುಪಿಯ ಶಾಂಭವಿ ಹೋಟೆಲ್‌ನಲ್ಲಿ ಎರಡು ರೂಮ್ ಬುಕ್ ಮಾಡಿ ತಂಗಿದ್ದ ಅವರು, ಕೆಲ ಹೊತ್ತಿನ ಬಳಿಕ ಊಟಕ್ಕೆಂದು ಹೊರಗಡೆ ಹೋಗಿದ್ದರು. ಈ ವೇಳೆ ನನಗೆ ಹೊಟ್ಟೆ ಸರಿ ಇಲ್ಲ ಎಂದು ಸ್ನೇಹಿತರು ಹೇಳಿ ಪಾರ್ಸೆಲ್ ತೆಗೆದುಕೊಂಡು ಮೂವರು ಹೋಟೆಲ್‌ಗೆ ಬಂದಿದ್ದು, ಸಂತೋಷ್ ಪಾಟೀಲ್ ಅವರನ್ನು ಬಿಟ್ಟು ಮತ್ತೆ ಇಬ್ಬರು ಹೊರಗಡೆ ಹೋಗಿದ್ದರು. ತಡರಾತ್ರಿ ಹೋಟೆಲ್‌ಗೆ ಆಗಮಿಸಿದ್ದ ಕಾರಣ ಸ್ನೇಹಿತರು ಸಂತೋಷ್ ಅವರ ರೂಮ್‌ಗೆ ಹೋಗದೇ ತಮ್ಮ ರೂಮ್‌ನಲ್ಲಿ ಮಲಗಿದ್ದರು.
ಧಾರವಾಡದಲ್ಲಿ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್ ಶೆಟ್ಟಿ ಅವರು ಇಂದು ಮುಂಜಾನೆ ಬೆಳಗ್ಗೆ ಟಿವಿ ವೀಕ್ಷಿಸಿದ್ದು, ನಾಪತ್ತೆ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿದಿದೆ. ಕೂಡಲೇ ರೂಮ್‌ನ ಬೇರೆ ಕೀ ಮೂಲಕ ಬಾಗಿಲು ತೆರೆದಿದ್ದು, ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಸ್ನೇಹಿತರೊಂದಿಗೆ ಇದ್ದ ಸಂತೋಷ್ ಯಾವತ್ತು ಆತ್ಮಹತ್ಯೆ ಮಾಡಿಕೊಳ್ಳುವ ಲಕ್ಷಣವೂ ಇರಲಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಉಡುಪಿಯ ಶಾಂಭವಿ ಲಾಡ್ಜ್ ಮುಂದೆ ಸಂತೋಷ್ ಪಾಟೀಲ್ ಮತ್ತು ಗೆಳೆಯರ ಕಾರು ಪತ್ತೆಯಾಗಿದೆ. ಬೆಂಗಳೂರು ದಕ್ಷಿಣ ನೋಂದಣಿಯ ka 05 mn 4166 ನಂಬರ್ ನ ಕಾರಿನಲ್ಲಿ ಮೂವರು ಗೆಳೆಯರು ಪ್ರವಾಸಕ್ಕೆಂದು ಬಂದಿದ್ದರು. ಪ್ರವಾಸದ ವೇಳೆ ಗೆಳೆಯರು ಬಟ್ಟೆ , ಚಪ್ಪಲಿ, ಆಹಾರ ಖರೀದಿಸಿದ್ದು, ಕಾರಿನಲ್ಲಿ ವಿಧಾನಸೌಧ ಪ್ರವೇಶದ ಪಾಸ್ ಪತ್ತೆಯಾಗಿದೆ.