ಉಡುಪಿ: ಸಚಿವ ಈಶ್ವರಪ್ಪರಿಂದ ಮೋಸಗೊಂಡಿದ್ದೇನೆ ಎಂದೂ ದೂರಿದ ಗುತ್ತಿಗೆದಾರ ವಿಷ ಕುಡಿದು ಆತ್ಮಹತ್ಯೆ
ಉಡುಪಿ ಎ.12 ( ಉಡುಪಿ ಟೈಮ್ಸ್ ವರದಿ): ನನ್ನ ಸಾವಿಗೆ ಸಚಿವ ಕೆಎಸ್. ಈಶ್ವರಪ್ಪ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇಬ್ಬರು ಸ್ನೇಹಿತರೊಂದಿಗೆ ಬಂದಿದ್ದ ಇವರು ಉಡುಪಿಯ ಶಾಂಭವಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಇದೀಗ ಹೋಟೆಲ್ ನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ದಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ್ದ ಕುಂದಾನಗರಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಅವರು ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ’ ಎಂದು ವಾಟ್ಸ್ ಆ್ಯಪ್ ಮೆಸೇಜ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು.
ಡೆತ್‌ನೋಟ್ ಮೆಸೇಜ್ ಮಾಹಿತಿ ಬೆನ್ನಲ್ಲೇ ಸಂತೋಷ ಪಾಟೀಲ್ ಪತ್ತೆಗೆ ಪೊಲೀಸರು ಮುಂದಾಗಿದ್ದರು. ಈ ನಡುವೆ ಸ್ನೇಹಿತರೊಂದಿಗೆ ಉಡುಪಿಗೆ ಬಂದಿದ್ದ ಅವರು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಈಶ್ವರಪ್ಪ ತಾವು ಮಾಡಿದ 108 ಕಾಮಗಾರಿ ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಸಂತೋಷ ಪಾಟೀಲ್ ಆರೋಪಿಸಿದ್ದರು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು ಎಂದು ತಿಳಿದು ಬಂದಿದೆ.
ನನ್ನ ಸ್ನೇಹಿತರಾದ ಸಂತೋಷ ಮತ್ತು ಪ್ರಶಾಂತ ಅವರನ್ನು ನಾನು ಪ್ರವಾಸಕ್ಕೆ0ದು ಕರೆದುಕೊಂಡು ಬಂದಿದ್ದೇನೆ ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದೂ ತಮ್ಮ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಸ್ಥಳಕ್ಕೆ ಎಸ್ ಪಿ ವಿಷ್ಣುವರ್ಧನ್ ಸಹಿತ ಹಿರಿಯ ಅಧಿಕಾರಿಗಳು ಆಗಮಿಸಿದ್ದು ,ಉಡುಪಿ ನಗರ ಪೊಲೀಸ್, ಬೆರಳಚ್ಚು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.