ಕನ್ನಡದ ತೇರೆಳೆಯಲು ಸಿದ್ಧವಾಗುತಿದೆ ಕುಂದನಾಡು

ಬರಹ: ದಿವ್ಯ ಮಂಚಿ

ಕುಂದಾಪುರ (ಉಡುಪಿ ಟೈಮ್ಸ್ ವರದಿ ): ಕನ್ನಡ ಭಾಷೆಯು ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಮುಖ್ಯವುಳ್ಳದ್ದು ಹಾಗೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು 45 ದಶಲಕ್ಷ (4.5 ಕೋಟಿ) ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಭಾಷೆ ಇಪ್ಪತೊಂಬತ್ತನೆಯ ಸ್ಥಾನ ಪಡೆದುಕೊಂಡಿದೆ. ಹತ್ತು ವರ್ಷಗಳ ಹಿಂದಿನ ಜನಗಣತಿಯಲ್ಲಿ 6.4 ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದ್ದು, ಇವರಲ್ಲಿ 5.5 ಕೋಟಿ ಜನರ ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ ಎಂದೂ ತಿಳಿದು ಬಂದಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಆದುನಿಕ ಜೀವನ ಶೈಲಿಯೋ ಅಥವಾ ಇಂಗ್ಲಿಷ್ ವ್ಯಾಮೋಹವೋ ಅಥವಾ ಇತರ ಭಾಷೆಗಳ ಪ್ರಭಾವವೋ ಕನ್ನಡ ನಾಡಿನಲ್ಲಿಯೇ ಕನ್ನಡ ಭಾಷೆ ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕೆಲವು ಕಡೆಗಳಲ್ಲಿ ಅಂತು ಕನ್ನಡವನ್ನು ಮಾತನಾಡಲೂ ಹಿಂದೇಟು ಹಾಕುವವರನ್ನು ಕಾಣಬಹುದು ಇಂತಹ ಸಂದರ್ಭದಲ್ಲಿ ಯುವ ಪೀಳಿಗೆ ಜೊತೆಗೆ ಆಂಗ್ಲ ಭಾಷಾ ವ್ಯಾಮೋಹ ಇರುವವರಿಗೆ ಕನ್ನಡ ಭಾಷೆ ಸಾಹಿತ್ಯದ ಬಗೆಗೆ ಅರಿವು ಮೂಡಿಸುವ ಅಗತ್ಯ ಇದೆ. ಹಾಗಂತ ಕನ್ನಡ ನಾಡಿನಲ್ಲಿ ಕನ್ನಡ ಮರೆಯಾಗಿಲ್ಲ. ಕನ್ನಡವನ್ನು ನಿರ್ಲಕ್ಷಿಸುವ ಬೆರಳೆಣಿಕೆಯ ಮಂದಿಯ ನಡುವೆ ಕನ್ನಡವೇ ಉಸಿರು ಎಂದು ಬದುಕುವ ಜನ ಬಹಳಷ್ಟಿದ್ದಾರೆ. ಕನ್ನಡಕ್ಕಾಗಿ ಕನ್ನಡ ಭಾಷೆಯ ಉಳಿವಿಗಾಗಿ ದುಡಿಯುತ್ತಿರುವವರೂ ಇದ್ದಾರೆ.

ಇಂತಹ ಕನ್ನಡ ನಾಡಿನ ನೆಲ, ಜನ, ನಾಡು, ನುಡಿಯ ಬಗ್ಗೆ ಅಪಾರ ಗೌರವ ಹೊಂದಿರುವವರಿಗೆ ಗೌರವಿಸುವ, ಕನ್ನಡ ಸಾಹಿತ್ಯ ಲೋಕದಲ್ಲಿ ಸಾಧಿಸಿದವರಿಗೆ ಗೌರವಿಸುವ, ಯುವ ಕನ್ನಡಾಭಿಮಾನಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವೇ ಕನ್ನಡ ಸಾಹಿತ್ಯ ಸಮ್ಮೆಳನ ಇದು ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ನಡೆಯುತ್ತದೆ. ನಮ್ಮ ಕನ್ನಡ ನಾಡಿನ ನಾಡು ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ಜನರಿಗೆ ತಿಳಿಯ ಪಡಿಸಬೇಕು ಎಂಬ ಉದ್ದೇಶದಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಚರಿಸಲಾಗುತ್ತದೆ.

ಅದೇ ರೀತಿ ಉಡುಪಿ ಜಿಲ್ಲೆಯಲ್ಲಿಯೂ ಕಳೆದ ಹಲವು ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಉಡುಪಿ ಜಿಲ್ಲಾ 15ನೆ ಕನ್ನಡ ಸಾಹಿತ್ಯ ಸಮ್ಮೇಳನ ಎ.14ರಿಂದ 16ರವರೆಗೆ ನಡೆಯಲಿದೆ. ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ `ತುರಾಯಿ’- ಅನ್ವೇಷಣೆಯ ಪ್ರತಿಬಿಂಬ ಎಂಬ ಅಡಿಬರಹದೊಂದಿಗೆ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕವಿ ಮುದ್ದಣ ವೇದಿಕೆ ಯಲ್ಲಿ ನಡೆಯುತ್ತಿದ್ದು, ಹಿರಿಯ ಜಾನಪದ ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕರಾದ ಎ.ವಿ.ನಾವಡ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ಎ.14 ರಂದು ಅಪರಾಹ್ನ 2.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಉಪನ್ಯಾಸಕ ಸಾಹಿತಿ, ಸಂಶೋಧಕ, ವಿಶ್ರಾಂತ ಕುಲಸಚಿವ. ಎ.ವಿ. ನಾವಡ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಅವರೇ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದಲ್ಲಿ ತಾಳಮದ್ದಲೆ, ಸಾಂಸ್ಕೃತಿಕ ವೈವಿಧ್ಯ, ಹೋಳಿ ಕುಣಿತ, ನೃತ್ಯ ಸಿಂಚನ ಕಾರ್ಯಕ್ರಮ ನಡೆಯಲಿದೆ. ಎ.15 ರಂದು ಬೆಳಗ್ಗೆ 8.30 ಕ್ಕೆ ಧ್ವಜಾರೋಹಣ ನಡೆಯಲಿದ್ದು, ಬಳಿಕ ಸಮ್ಮೇಳನಾಧ್ಯಕ್ಷರನ್ನು ಕುಂದೇಶ್ವರ ದೇವಸ್ಥಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಪುರ ಮೆರವಣಿಗೆಯೊಂದಿಗೆ ಕರೆತರಲಾಗುವುದು. ಬೆಳಗ್ಗೆ 10 ಗಂಟೆಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಸಮ್ಮೇಳನವನ್ನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.

ನಂತರ ವಿವಿಧ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ರಾಷ್ಟ್ರೀಯತೆ ಒಂದು ಚಿಂತನ, ನಮ್ಮ ಉಡುಪಿ, ಕವಿಗೋಷ್ಠಿ, ಕುಂದಾಪ್ರ ಕನ್ನಡದ ಭಾಷಾ ಸೊಗಡು- ಹರಟೆ, ಸಾಂಸ್ಕೃತಿಕ ವೈಭವ ಮತ್ತು ನಾಟಕ ನಡೆಯಲಿದೆ. ಎ.16 ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ ಕಟೀಲು ಸಮಾರೋಪ ಭಾಷಣ ಮಾಡಲಿರುವರು. ಮುಖ್ಯ ಅತಿಥಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಾಡು ನುಡಿಗೆ ಸೇವೆ ಸಲ್ಲಿಸಿದ 19 ಮಂದಿ ಸಾಧಕರಿಗೆ ಮತ್ತು ಆರು ಸಂಘ ಸಂಸ್ಥೆಗಳನ್ನು ಸನ್ಮಾನಿಸಲಾಗುವುದು. ನಡು ನಡುವೆ ಕನ್ನಡ ಗೀತಾ ಗಾಯನ ಹಾಗೂ ಮಿಮಿಕ್ರಿ ಕಾರ್ಯಕ್ರಮ ಕೂಡಾ ನಡೆಯಲಿದೆ.

ಇದೀಗ ಸಾಹಿತ್ಯ ಹಬ್ಬ 15 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕುಂದಾಪುರದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಈ ಸಮ್ಮೇಳನ ಒಂದಷ್ಟು ಸಾಹಿತ್ಯಾಭಿಮಾನಿಗಳಿಗೆ ಹಾಗೂ ಸಾಹಿತ್ಯಾಭಿರುಚಿ ಹೊಂದಿರುವವರಿಗೆ ಸಂಭ್ರಮದ ಸಾಹಿತ್ಯ ಹಬ್ಬವಾಗಲಿದೆ.

Leave a Reply

Your email address will not be published. Required fields are marked *

error: Content is protected !!