ಕಾಂಗ್ರೆಸ್ ನಿಂದ ನಾವು ಏನೂ ಕಲಿಯ ಬೇಕಾಗಿಲ್ಲ : ಸಿದ್ದರಾಮಯ್ಯ ಅವರ ಹೇಳಿಕೆಗೆ ಮುಖ್ಯಮಂತ್ರಿ ತಿರುಗೇಟು
ಉಡುಪಿ ಎ.11 (ಉಡುಪಿ ಟೈಮ್ಸ್ ವರದಿ ): ನಮ್ಮ ಕೆಲಸ ಮಾತನಾಡಬೇಕೆ ಹೊರತು ನಾವು ಮಾತನಾಡಬಾರದು. ಕಾಂಗ್ರೆಸ್ ನಿಂದ ನಾವು ಏನೂ ಕಲಿಯ ಬೇಕಾಗಿಲ್ಲ ಎಂದು ರಾಜ್ಯದ ವಿದ್ಯಾಮಾನಗಳ ಬಗ್ಗೆ ಮುಖ್ಯಮಂತ್ರಿ ಮೌನವಾಗಿದ್ದಾರೆ ಎಂಬ ಸಿದ್ಧರಾಮಯ್ಯ ಅವರ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.
ಇಂದು ಉಡುಪಿ ಪ್ರವಾಸ ಕೈಗೊಂಡಿರುವ ಅವರು ಆದಿ ಉಡುಪಿಯ ಹೆಲಿಪ್ಯಾಡ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿದ್ಯಾಮಾನ ಗಳ ಬಗ್ಗೆ ಮೌನವಾಗಿದ್ದೀರ ಎಂಬ ವಿಪಕ್ಷಗಳ ಹೇಳಿಕೆಗೆ ಏನು ಹೇಳುತ್ತೀರ ಎಂಬ ಪ್ರಶ್ನೆಗೆ ಉತ್ತರರಿಸಿದ ಅವರು. ನಮ್ಮ ಕೆಲಸ ಮಾತನಾಡಬೇಕೆ ಹೊರತು ನಾವು ಮಾತನಾಡಬಾರದು. ಯಾವ ಯಾವ ಸಂದರ್ಬದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ನಾವು ಮಾಡುತ್ತೇವೆ. ಇವರಿಂದ ಏನೂ ಕಲಿಯಬೇಕಾಗಿಲ್ಲ. ಇವರು ಹಲವಾರು ಕೊಲೆಗಳಿಗೆ ನೇರವಾಗಿ ಆರೋಪಿಗಳಾಗಿದ್ದ ಕೆಲವು ಸಂಸ್ಥೆಗಳ ಪ್ರಕರಣವನ್ನು ಸರಕಾರದವರೆಗೆ ತಂದು ಬಳಿಕ ಕೈಬಿಟ್ಟಿದ್ದಾರಲ್ಲ. ಆಗ ಇವರ ಕರ್ತವ್ಯ ಪ್ರಜ್ಞೆ ಎಲ್ಲಿ ಹೋಗಿತ್ತು. ಆದ್ದರಿಂದ ಇವರಿಂದ ನಾವೇನು ಕಲಿಯ ಬೇಕಾಗಿಲ್ಲ. ನಮ್ಮ ರಾಜ್ಯ ಶಾಂತಿ ಸುವ್ಯವಸ್ಥೆ ಹಾಗೂ ಅತ್ಯಂತ ಪ್ರಗತಿ ಪರ ರಾಜ್ಯವಾಗಿದೆ. ಅದನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ಅದನ್ನು ನಾವು ಮಾಡುತ್ತಿದ್ದೇವೆ, ಮುಂದೇನು ಮಾಡಿ ತೋರಿಸುತ್ತೇವೆ ಎಂದರು.
ರಾಜ್ಯದಲ್ಲಿ ಪಿಪಿಪಿ(ಪಬ್ಲಿಕ್ ಪ್ರೈವೆಟ್ ಪಾರ್ಟಿಸಿಪೇಶನ್) ಮಾದರಿಯಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಡುಪಿಯಲ್ಲಿ ಮೆಡಿಕಲ್ ಕಾಲೇಜು ಪಿಪಿಪಿ ಮಾಡೆಲ್ ನಲ್ಲಿ ಪ್ರಾರಂಭವಾಗಲಿದೆ.
ಎಲ್ಲಾ ವಿಚಾರದ ಬಗ್ಗೆ ಪೂರ್ವಭಾವಿಯಾಗಿ ಆಲೋಚನೆ ಮಾಡಿಯೇ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಹಾಗೂ ಇದೇ ವೇಳೆ ಮೆಡಿಕಲ್ ಕಾಲೇಜನ್ನು ಪಿಪಿಪಿ ಮಾದರಿಯಲ್ಲಿ ತೆರೆಯುವ ಬಗ್ಗೆ ಐಡೆಕ್ ಕಂಪೆನಿ ಡಿಪಿಆರ್ ತಯಾರಿಸಿದರೆ ಸರಕಾರದ ಪರವಾಗಿ ವರದಿ ಬರಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ವರದಿ ಸರಕಾರದ ಪರವಾಗಿ ಬರುತ್ತದೆ ಎಂಬುದಲ್ಲ ಮುಖ್ಯ. ಪಿಪಿಪಿ ಮಾಡೆಲ್ ನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮೊದಲಾದ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಪ್ರೊಫೆಶನಲ್ ಕಂಪೆನಿಗಳು ಮಾಡುವಂತಹದ್ದು, ಆದರೆ ಅಂತಿಮ ನಿರ್ಧಾರ ಸರಕಾರ ಮಾಡುವಂತಹದ್ದು, ಐಡೆಕ್ ಒಂದು ಪ್ರೊಫೇಷನಲ್ ಕಂಪೆನಿ ಹಾಗಾಗಿ ಈ ಬಗ್ಗೆ ಅದು ಡಿಪಿಆರ್ ಸಿದ್ಧ ಪಡಿಸಿ ವರದಿ ನೀಡಲಿದೆ ಎಂದರು.
ಸಿದ್ದರಾಮಯ್ಯ ನವರು ಸಿಎಂ ನಾಲಗೆ ಕಳೆದುಕೊಂಡಿದ್ದಾರೆ ಎನ್ನುವಂತಹ ಮಾತುಗಳನ್ನು ಆಡುತ್ತಿದ್ದಾರೆ ಇದರ ಬಗ್ಗೆ ಏನು ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಅವರ ಕಾಲದಲ್ಲಿ ಹತ್ತು ಹಲವಾರು ಕೊಲೆಗಳಾಯಿತು. ಆ ಸಂಸ್ಥೆಗಳ ಪ್ರಕರಣವನ್ನೇ ವಿಡ್ರಾ ಮಾಡಿದ್ರಲ್ಲಾ ಅವಾಗ ಇವರು ಬುದ್ಧಿ ಕಳೆದುಕೊಂಡಿದ್ರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಆ ಆಸಂಸ್ಥೆಗಳನ್ನು ಬ್ಯಾನ್ ಮಾಡುತ್ತೀರಾ ಎಂದು ಪತ್ರಕರ್ತರೋಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳನ್ನು ಧರ್ಮ ಸಂಘರ್ಷ ಎನ್ನುತ್ತೀರಾ, ಧರ್ಮ ಜಾಗೃತಿ ಎನ್ನುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಯಾರು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಲಿ. ಆದರೆ ಸಂವಿಧಾನ ಬದ್ಧವಾಗಿ ರಚಿಸಿರುವ ಸರಕಾರ ಕಾನೂನು ಸುವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈ ದೃಷ್ಠಿ ಕೋನ ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಾ ಇದ್ದೇವೆ, ಅವರವರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಏನೂ ತೊಂದರೆ ಇಲ್ಲ. ಆದರೆ ಕಾನೂನನ್ನು ಕೈಗೆ ತೆಗೆದುಕೊಂಡಾಗ. ಅಥವಾ ಹಿಂಸೆಗಿಳಿದಾಗ ಮಾತ್ರ ಸರಕಾರ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಈಗಾಗಲೇ ಕಳುಹಿಸಿದ್ದೇವೆ ಎಂದರು.
ಮಂಗಳೂರಿನಲ್ಲಿ ಲವ್ ಜಿಹಾದ್ ತಡೆಗೆ ಹಿಂದೂ ಟಾಸ್ಕ್ ಪೋರ್ಸ್ ಮಾಡಲು ಹೊರಟಿದ್ದಾರೆ. ಇದನ್ನು ಸರಕಾರ ಮಾಡಲು ಸಾಧ್ಯವಿಲ್ಲವೇ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾರು ರಕ್ಷಣೆ ಮಾಡಬೇಕೋ ಅವರವರು ಅವರವರ ರಕ್ಷಣೆ ಮಾಡುತ್ತಾರೆ ಆದರೆ ಎಲ್ಲದಕ್ಕೂ ಕಾನೂನು ಇದೆ. ಕೆಲವು ಕಾನೂನುಗಳನ್ನು ಹಿಂದಿನ ಸರಕಾರವೇ ರಚಿಸಿರುವುದು. ನಾವು ಯಾವುದೇ ಹೊಸ ಕಾನೂನು ಮಾಡುತ್ತಿಲ್ಲ. ಹಿಂದಿನ ಕಾನೂನು ಪ್ರಕಾರ ನಡೆಯುವುದು ಆ ಕಾನೂನು ರಕ್ಷಣೆ ಮಾಡುತ್ತಿರುವುದು ನಮ್ಮ ಕೆಲಸ ಎಂದರು.