ವಾದಗಳು ಆರ್ಭಟಗಳು ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ: ಸಚಿವ ಕೋಟ

ಉಡುಪಿ ಎ.11 (ಉಡುಪಿ ಟೈಮ್ಸ್ ವರದಿ): ವಾದಗಳು ಆರ್ಭಟಗಳು ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ ಎಂದು ಸಿದ್ಧರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿರುಗೇಟು ನೀಡಿದ್ದಾರೆ.

ಇಂದು ಆದಿ ಉಡುಪಿಯ ಹೆಲಿಪ್ಯಾಡ್ ನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ನವರು ಕಾಲಕಾಲಕ್ಕೆ ವಿರೋಧ ಪಕ್ಷದ ನಾಯಕರಾಗಿ ವಾಗ್ದಾಳಿ ನಡಸುವುದು ಸಾಮಾನ್ಯವಾಗಿದೆ. ಆದರೆ ವಾದಗಳು ಆರ್ಭಟಗಳು ಸಮಸ್ಯೆಯನ್ನು ಪರಿಹಾರ ಮಾಡುವುದಿಲ್ಲ, ವಾಸ್ತವಿಕ ವಿಚಾರಗಳ ನೆಲೆಗಳನ್ನು ಇಟ್ಟುಕೊಂಡು ಉತ್ತಮ, ಸಮರ್ಥ ಆಡಳಿತ ನೀಡುವುದರ ಮೂಲಕ ಸಮಸ್ಯೆ ಪರಿಹಾರ ಮಾಡಬಹುದು. ಸಮಸ್ಯೆಯನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಯವರು ಅತ್ಯಂತ ಸಮರ್ಥ ಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಸಹಜವಾಗಿ ವಿರೋಧ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯನವರು ಆರ್ಭಟಿಸುತ್ತಿದ್ದಾರೆ. ಅವರೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ ಎಂದರು.

ಈ ವೇಳೆ ಮುಖ್ಯಮಂತ್ರಿಗಳಿಗೆ ಕಣ್ಣಿಲ್ಲ, ನಾಲಗೆ ಇಲ್ಲ ಎಂಬ ಸಿದ್ಧರಾಮಯ್ಯ ಅವರ ಟೀಕೆಗೆ ಸಿಎಂ ಅವರು ಯಾಕೆ ಮೌನವಾಗಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಲವೊಂದು ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಬೇಕು ಎಂದೆನಿಸುವುದಿಲ್ಲ. ದೊಡ್ಡವರು ಆಡುವ ಸಣ್ಣ ಮಾತಿಗೆ ಉತ್ತರ ಇರುವುದಿಲ್ಲ. ಅದಕ್ಕಾಗಿ ಸಿದ್ದರಾಮಯ್ಯನವರು ನನ್ನ ದೃಷ್ಟಿಯಲ್ಲಿ ರಾಜಕಾರಣದಲ್ಲಿ ದೊಡ್ಡ ಮನುಷ್ಯ. ಮಾಜಿ ಮುಖ್ಯಮಂತ್ರಿಗಳಾಗಿದ್ದವರು. ಅವರು ಸಣ್ಣ ಮಾತುಗಳನ್ನು ಆಡಿದರೆ ಉತ್ತರ ಕೊಡಬೇಕು ಎಂದೆನಿಸುವುದಿಲ್ಲ . ಮುಖ್ಯಮಂತ್ರಿಯವರ ಮೌನವೇ ಅರ್ಥಗರ್ಬಿತ. ಕೆಲವು ಪ್ರಶ್ನೆಗಳಿಗ ನಿರುತ್ತರವೇ ಉತ್ತರ ಎಂದರು ಹಾಗೂ ಮುಖ್ಯ ಮಂತ್ರಿಯವರು ಸಮರ್ಥವಾದ ಆಡಳಿತ ನೀಡುತ್ತಿದ್ದಾರೆ. ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.

ಗೃಹ ಮಂತ್ರಿಗಳು ಸುಮ್ಮನಿದ್ದಾರೆ ಎಂಬ ಮಾತನ್ನು ಸಿದ್ಧರಾಮಯ್ಯ ಅವರು ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ ಅತ್ಯಂತ ಪ್ರಾಮಾಣಿಕ , ಶ್ರದ್ಧೆ , ಸಮರ್ಥರಾದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಎನ್ನುವ ವಿಶ್ವಾಸ ವಿದೆ. ಅವರ ಉತ್ತಮ ಕಾರ್ಯವೈಖರಿ ಮೂಲಕ ಇಡೀ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮುಂದುವರೆಯಲಿದೆ ಎಂದರು.

ಮುಖ್ಯ ಮಂತ್ರಿಗಳನ್ನು ಇಳಿಸುವ ತಾಕತ್ತು ನಮಗಿದೆ ಎಂಬ ಯತ್ನಾಳ್ ವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು. ಯತ್ನಾಳ್ ಅವರು ಅನೇಕ ಸಾರಿ ಕೆಲವು ಮಾತುಗಳನ್ನು ಆಡುತ್ತಿರುತ್ತಾರೆ. ಕೆಲ ದಿನ ಬಿಟ್ಟು ಮತ್ತೆ ಅವರ ಮಾತಿಗೆ ಅವರೇ ಉತ್ತರ ನೀಡುತ್ತಾರೆ. ಆದ್ದರಿಂದ ಪಕ್ಷ ತಾಳ್ಮೆಯಿಂದ ಇದೆ ಎಂದರು.
ಹಿಜಾಬ್ ಹೋರಾಟಕ್ಕೆ ಆಲ್ ಖೈದಾ ಮುಖ್ಯಸ್ಥನ ಬೆಂಬಲ ವಿಚಾರದ ತನಿಖೆ ಬಗ್ಗೆ ಉತ್ತರಿಸಿದ ಅವರು, ಮುಖ್ಯ ಮಂತ್ರಿಗಳು ಈಗಾಗಲೇ ಅಗತ್ಯ ತನಿಖೆ ನಡೆಸಿ ಎಂದು ನಿರ್ದೇಶನ ನೀಡಿದ್ದಾರೆ. ಹಿಜಾಬ್ ನ ಬಗ್ಗೆ ಹೈಕೋರ್ಟ್ ತೀರ್ಪು ನೀಡಿ ಆಗಿದೆ. ಈ ಬಗ್ಗೆ ಕಾಂಗ್ರೆಸ್ ನವರಿಗೆ, ಸಿದ್ದರಾಮಯ್ಯ, ಡಿಕೆಶಿ ಯವರಿಗೆ ಭಿನ್ನಾಭಿಪ್ರಾಯ ಇದ್ದರೆ ಸುಪ್ರಿಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದೇ ಹೊರತು ಹೈ ಕೊರ್ಟ್ ಕೊಟ್ಟ ಆದೇಶ ಪಾಲಿಸಬೇಡಿ ಎಂದರೆ ಅರ್ಥ ಏನು ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

error: Content is protected !!