ಉಡುಪಿ: ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಸೇರಿಸಬೇಕು- ನೌಕರರ ಸಂಘ ಆಗ್ರಹ
ಉಡುಪಿ ಜ.14 (ಉಡುಪಿ ಟೈಮ್ಸ್ ವರದಿ) : ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು. ನೀರು ಸರಬರಾಜು ಸಹಾಯಕರು, ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್ ಗಳು ಸೇರಿದಂತೆ 15,000 ಕ್ಕೂ. ಹೆಚ್ಚು ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಹೊರ ಗುತ್ತಿಗೆ ನೌಕರರ ಸಂಘ ಸರಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿನಯ್ ಕುಮಾರ್ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು, ನೀರುಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್ ಗಳನ್ನು ಗುತ್ತಿಗೆಯಲ್ಲಿ ಉಳಿಸಿ ತಾರತಮ್ಯ ಎಸಗಿದೆ ಎಂದು ಆರೋಪಿಸಿದ್ದಾರೆ.
ಪ್ರತೀ ಬಾರಿ ಹೊರ ಗುತ್ತಿದೆ ನೌಕರರನ್ನು ನೇರ ಪಾವತಿಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದಾಗಲೂ ಸರಕಾರ ಪೌರಕಾರ್ಮಿರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದೆ. ಈ ಮೂಲಕ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ನಡೆದುಕೊಳ್ಳುತ್ತಿದೆ. ಆದ್ದರಿಂದ ಜ.25 ರೊಳಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು. ನೀರು ಸರಬರಾಜು ಸಹಾಯಕರು, ಲೋಡರ್ಸ್ ಕ್ಲೀನರ್ಸ್ ಹೆಲ್ಪರ್ಸ್ ಗಳಾಗಿ ದುಡಿಯುತ್ತಿರುವ ನೌಕರರನ್ನು ನೇರಪಾವತಿಗೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಜ.31 ರಂದು ರಾಜ್ಯಾಧ್ಯಕ್ಷರ ಆದೇಶದಂತೆ ವಿಧಾನಸೌಧ ಮುತ್ತಿಗೆ ಹಾಗೂ ಬೆಂಗಳೂರು ಚಲೋ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. 2017ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ ಉಳಿಸಲಾಯಿತು. ಈಗಲೂ ಸಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲೆ ಮುಂದುವರಿಸುವ ಸರಕಾರದ ನೀತಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಪೌರಕಾರ್ಮಿಕರ ನೇರನೇಮಕಾತಿಯನ್ನು ಸ್ವಾಗತಿಸುತ್ತೇವೆ ಆದರೆ ಹೊರಗುತ್ತಿಗೆ ನೌಕರರ ನ್ಯಾಯ ಬದ್ದ ಹಕ್ಕಿಗಾಗಿ ಆಗ್ರಹಿಸುವುದು ನಮ್ಮ ಹಕ್ಕಾಗಿದೆ. ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ ಒಡೆದಾಳುವ ನೀತಿ ಅನುಸರಿಸುವುದು ಯಾವುದೇ ಸರಕಾರಕ್ಕೆ ಶೋಭೆಯಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ನಿರಂಜನ್, ಪ್ರಸಾದ್ ಕೊರಗ, ರವೀಂದ್ರ ಉಪಸ್ಥಿತರಿದ್ದರು.