ಹಿಂದುತ್ವ ಎಂಬುದು ಸಮಾನತೆ ಅಲ್ಲ,ಅದು ಬಂಧುತ್ವ ಛೇದಿಸುವ ಹಾಗೂ ಸಂಬಂಧ ಒಡೆಯುವ ಪರಿಕಲ್ಪನೆ: ಡಾ.ವಡ್ಡಗೆರೆ ನಾಗರಾಜಯ್ಯ
ಉಡುಪಿ, ಜೂ.27(ಉಡುಪಿ ಟೈಮ್ಸ್ ವರದಿ) : ಹಿಂದುತ್ವ ಎಂಬುದು ಸಮಾನತೆ ಅಲ್ಲ ಅದು ಬಂಧುತ್ವ ಛೇದಿಸುವ ಹಾಗೂ ಸಂಬಂಧ ಒಡೆಯುವ ಪರಿಕಲ್ಪನೆಯಾಗಿದೆ ಎಂದು ಕವಿ, ಸಂಶೋಧಕ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ನಿನ್ನೆ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ವಸಾಹತುಶಾಹಿ ಮತ್ತು ದಲಿತ ಚಳವಳಿಯ ಪ್ರತಿರೋಧ’ ಎಂಬ ವಿಚಾರ ಸಂಕಿರರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಲಿತ ಚಳವಳಿಯು ಬಂಧುತ್ವ ಬೆಸೆಯುವ ಪರಿಕಲ್ಪನೆಯಾದರೆ ಹಿಂದುತ್ವ ಎಂಬುದು ಬಂಧುತ್ವ ಛೇದಿಸುವ ಹಾಗೂ ಸಂಬಂಧ ಒಡೆಯುವ ಪರಿಕಲ್ಪನೆಯಾಗಿದೆ. ಹಿಂದುತ್ವ ಎಂಬುದು ಸಮಾನತೆ ಅಲ್ಲ ದಲಿತ ಎಂಬ ಶಬ್ದಕ್ಕೆ ಹಿಂದುತ್ವದ ವಿರುದ್ಧ ಹೋರಾಟದ ದೊಡ್ಡ ಶಕ್ತಿ ಇದೆ ಎಂದು ತಿಳಿಸಿದ್ದಾರೆ.
ದಲಿತರ ಸಮಸ್ಯೆಗಳಿಗೆ ಗಳಿಗೆ ಕೇವಲ ದಲಿತರು, ಮಹಿಳೆಯರ ಸಮಸ್ಯೆ ಗಳಿಗೆ ಮಹಿಳೆಯರು ಮಾತ್ರ ಹೋರಾಟ ಮಾಡುವುದಲ್ಲ. ಎಲ್ಲರ ಒಳಗೊಳ್ಳುವಿಕೆಯಿಂದ ಹೋರಾಟ ನಡೆಸಬೇಕಾಗಿದೆ. ದಲಿತ ಚಳವಳಿಯು ಸಮಾಜದಲ್ಲಿ ಸಂಕಷ್ಟದಲ್ಲಿರುವ ಹಾಗೂ ದುಃಖಿತರನ್ನು ತಬ್ಬಿಕೊಳ್ಳುವ ವಿಶಾಲ ಬಂಧುತ್ವದ ಚಳವಳಿಯಾಗಿರುವ ಕಾರಣಕ್ಕಾಗಿಯೇ ಹಿಂದುತ್ವದ ವಿರುದ್ಧ ಸೆಣಸುವ ಹಾಗೂ ಹೋರಾಟದ ಶಕ್ತಿಯನ್ನು ತನ್ನೊಳಗೆ ಧಾರಣೆ ಮಾಡಿ ನಡೆಸಬೇಕಾಗಿದೆ ಎಂದರು.
ಬಿ.ಕೃಷ್ಣಪ್ಪ ಕಟ್ಟಿದ ದಲಿತ ಚಳವಳಿಯಿಂದ ಇಂದು ಬಡವರ, ದಲಿತರ, ಶೋಷಿತರ ಮನೆಯೊಳಗೆ ಹೋರಾಟದ ದೀಪ ಬೆಳಗುತ್ತಿದೆ. ಹೊರಗಡೆ ನಮ್ಮ
ಶ್ರೇಷ್ಠ ಎಂದು ಬೀಗುವ ಬಿರುಗಾಳಿ ಬೀಸುತ್ತಿದೆ. ಇದಕ್ಕೆ ಸಿಕ್ಕಿ ಈ ದೀಪ ಆರದಂತೆ ಕಾಪಾಡಿಕೊಳ್ಳಬೇಕಾಗಿದೆ. ಇದು ಕೇವಲ ದಲಿತರ ಜವಾಬ್ದಾರಿ ಮಾತ್ರವಲ್ಲ, ಸಮಸ್ತ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಲೇಖಕರು ಪಠ್ಯ ಹಿಂಪಡೆಯುವ ಚಳವಳಿ ನಡೆಸಿದರೂ, ದೇವನೂರು, ದೇವೇಗೌಡರು, ಸಿದ್ದರಾಮಯ್ಯ ಪತ್ರ ಬರೆದರೂ, ಎಲ್ಲ ಕಡೆಗಳಿಂದ ಹೋರಾಟ ನಡೆದರೂ ಸರಕಾರ ಪಠ್ಯ ಪುಸ್ತಕಗಳನ್ನು ವಾಪಸ್ ಪಡೆದು ಕೊಂಡಿಲ್ಲ. ಇದು ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ನಡೆಸುತ್ತಿರುವ ಹಲ್ಲೆಯಾಗಿದೆ. ಪಠ್ಯದ ಮೂಲಕ ಮಕ್ಕಳ ಎಳೆ ಮೆದುಳಿಗೆ ಸಾಂಸ್ಕೃತಿಕ ವಿಷ ಉಣಿಸಿದರೆ ತಲೆಮಾರುಗಳೇ ನಾಶವಾಗಲಿದೆ. ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ಬ್ರಾಹ್ಮಣರನ್ನು ಮಾತ್ರ ಸೇರಿಸಿಕೊಳ್ಳುವ ಮೂಲಕ ಪಠ್ಯದಲ್ಲಿ ಸಾಂಸ್ಕೃತಿಕ ವಸಾಹತುಶಾಹಿ ತರುವ ಯತ್ನ ಮಾಡಲಾಗುತ್ತಿದೆ. ಇದೆಲ್ಲವೂ ಸಾಂಸ್ಕೃತಿಕ ಹೇರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ದೇಶದ ಕೇವಲ ಶೇ.3ರಷ್ಟಿರುವ ಜನವರ್ಗ ಶೇ.97ರಷ್ಟಿರುವ ಜನರ ಮೇಲೆ ತಮ್ಮ ಸಂಸ್ಕೃತಿ, ನಂಬಿಕೆ, ಗೊಡ್ಡು ಆಚಾರ ವಿಚಾರ, ಶಾಸ್ತ್ರ, ರಾಜ ಕೀಯ ಸಿದ್ಧಾಂತವನ್ನು ಹೇರುತ್ತಿದೆ. ಶೇ.3ರ ಜನರ ಸಂಸ್ಕೃತಿಯೊಳಗೆ ಇರುವ ಮೌಡ್ಯ, ಕಂದಾಚಾರ, ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವವರನ್ನು ದೇಶದ್ರೋಹಿ, ಧರ್ಮದ್ರೋಹಿಗಳೆಂದು ಬಿಂಬಸಲಾಗುತ್ತಿದೆ. ಅವರ ಸಂಸ್ಕೃತಿಯ ಪರ ಮಾತನಾಡುವವರನ್ನು ದೇಶಭಕ್ತರೆಂದು ಕರೆಯಲಾಗುತ್ತಿದೆ ಎಂದು ಟೀಕಿಸಿದರು.
ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನೇತ್ರತಜ್ಞ ಡಾ.ಪ್ರೇಮದಾಸ್ ಕಾರ್ಕಳ, ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಮುಖಂಡ ವಕೀಲ ಮಂಜುನಾಥ ಗಿಳಿಯಾರು, ಚಿಂತಕ ವಿಜಯ್, ದಲಿತ ಜನಪರ ಹೋರಾಟಗಾರ ಜಯನ್ ಮಲ್ಪೆ, ಅಂಬೇಡ್ಕರ್ ಯುವಸೇನೆಯ ಗೀತಾ ಉಡುಪಿ, ಭಗವಾನ್ ಮಲ್ಪೆ ಹಿರಿಯ ದಲಿತ ಮುಖಂಡ ದಯಾಕರ್ ಮಲ್ಪೆ ಉಪಸ್ಥಿತರಿದ್ದರು.