ಉಡುಪಿ: ಮಹಿಳಾ, ಮಕ್ಕಳ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ
ಉಡುಪಿ: ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದು, ವಿಶ್ವದರ್ಜೆಯ ಆರೋಗ್ಯ ಸೇವೆಗಳನ್ನು ಬಡವರಿಗೆ ಉಚಿತವಾಗಿ ನೀಡುತ್ತಿದೆ ಎಂದು ಬಿಆರ್‌ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆ ಜನರಲ್ ಮ್ಯಾನೇಜರ್ ಕುಶಾಲ್ ಶೆಟ್ಟಿ ತಿಳಿಸಿದರು .
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ 30 ವರ್ಷಗಳ ಅವಧಿಗೆ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅವಧಿ ಮುಗಿದ ಬಳಿಕ ಪರಿಹಾರ ಪಡೆಯದೇ ಎಲ್ಲ ಸೌಲಭ್ಯಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಲಾಗುವುದು. ಲಾಭ ರಹಿತ ಸೇವೆ ನೀಡುವುದು ಸಂಸ್ಥೆಯ ಉದ್ದೇಶ ಎಂದರು.
ಒಪ್ಪಂದದಲ್ಲಿ ಪ್ರಮುಖವಾಗಿ ಮೂರು ವಿಚಾರಗಳಿದ್ದು, 200 ಬೆಡ್ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದು, ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಪಿಎಂಸಿ ಕಾಯ್ದೆಯಡಿ ಸರ್ಕಾರ ನಿಗದಿಗೊಳಿಸುವ ದರ ಪಡೆದು ಚಿಕಿತ್ಸೆ ನೀಡುವುದು, ಜತೆಗೆ ಆರೋಗ್ಯ ಶಿಕ್ಷಣ ನೀಡಬೇಕು ಎಂಬ ಪ್ರಮುಖ ವಿಚಾರಗಳಿವೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಸಹ ಇಲ್ಲ. ರಿಸ್ಕ್ ಲೆವೆಲ್–3ರವರೆಗೂ ಚಿಕಿತ್ಸೆ ನೀಡಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾದ ನಂತರ ಗರ್ಭದಲ್ಲಿ ಮಗುವಿಗೆ ಕಾಣಿಸಿಕೊಳ್ಳುವ ಹೃದ್ರೋಗ ಸೇರಿದಂತೆ ಗಂಭೀರ ಕಾಯಿಲೆಗಳಿಗೂ ರಿಸ್ಕ್ ಲೆವೆಲ್–4 ಅಡಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು.
2017ರಲ್ಲಿ ಪಿಪಿಪಿ ಮಾದರಿಯಲ್ಲಿ 23 ಜಿಲ್ಲೆಗಳ 122 ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದ್ದು, 3000ಕ್ಕೂ ಹೆಚ್ಚು ಮಂದಿಗೆ ಡಯಾಲಿಸಿಸ್ ಮಾಡಲಾಗಿದೆ ಎಂದು ಅಂಕಿ ಅಂಶಗಳನ್ನು ನೀಡಿದರು.
ಡಿಸ್‌ಚಾರ್ಜ್ ಎಗೆನೆಸ್ಟ್ ಮೆಡಿಕಲ್ ಅಡ್ವೈಸ್ ಪ್ರಕರಣಗಳು ತೀರಾ ಕಡಿಮೆ ಇವೆ. ಶೇ 96.14ರಷ್ಟು ಎನ್‌ಐಸಿಯು ಪ್ರವೇಶಗಳನ್ನು ಯಶಸ್ವಿಯಾಗಿ ಡಿಸ್‌ಚಾರ್ಜ್ ಮಾಡುವ ಮೂಲಕ ರಾಜ್ಯಕ್ಕೆ 2ನೇ ಸ್ಥಾನ ಪಡೆಯಲಾಗಿದೆ. ಅತಿ ಕಡಿಮೆ ಆ್ಯಂಟಿ ಬಯೋಟಿಕ್ ಬಳಕೆ ಮಾಡುವ ಆಸ್ಪತ್ರೆಗಳಲ್ಲಿ ಆಸ್ಪತ್ರೆ ಕೊನೆಯ ಮೂರನೇ ಸ್ಥಾನದಲ್ಲಿದೆ. ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡುವ ಸಂಖ್ಯೆ ಶೇ 2ರಷ್ಟು ಮಾತ್ರ ಇದೆ ಎಂದು ತಿಳಿಸಿದರು.
2019ರಲ್ಲಿ ನವಜಾತ ಶಿಶು ಮರಣ ಪ್ರಮಾಣ ಶೇ 2.55, ಶಿಶುಮರಣ ಪ್ರಮಾಣ 2.8 ಇದ್ದು, ರಾಜ್ಯಕ್ಕೆ ಹೋಲಿಸಿದರೆ ತೀರಾ ಕಡಿಮೆಯಾಗಿದೆ. ಜತೆಗೆ ರೋಗಿಗಳಿಗೆ ಪ್ರಸವಪೂರ್ವ ಆರೈಕೆ, ಶಿಕ್ಷಣ ಪೌಷ್ಟಿಕಾಂಶಗಳ ಮಾಹಿತಿ ನೀಡಲು ತಜ್ಞ ವೈದ್ಯರಿದ್ದಾರೆ ಎಂದು ಕುಶಾಲ್ ಶೆಟ್ಟಿ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅಜಯ್ ರಾಜ್ ಮಲ್ಪೆ ಉಪಸ್ಥಿತರಿದ್ದರು.