ಉಡುಪಿ : ಉಸ್ತುವಾರಿ ಭಾಗ್ಯ ಯಾರಿಗಿದೆ ?

ಉಡುಪಿ : ಅಲ್ಲಿ ಮೈತ್ರಿ ಸರಕಾರ ಪತನವಾಗುತ್ತಿದ್ದಂತೆ ಬಿಜೆಪಿಯು ಆಡಳಿತ ಚುಕ್ಕಾಣಿ ಹಿಡಿಯಲು ಹೊರಟಿದೆ, ಇತ್ತ ಉಡುಪಿಯಲ್ಲಿ ಮೂರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕರು, ಹಿರಿತನ, ಅನುಭವ, ಜಾತಿ, ಪಕ್ಷ ನಿಷ್ಥೆಯ ಲೆಕ್ಕಾಚಾರದಲ್ಲಿ ತಮಗೆ ಮಂತ್ರಿ ಸ್ಥಾನ ದಕ್ಕಬಹುದೇನೋ ಎಂಬ ನೀರಿಕ್ಷೆಯಲ್ಲಿದ್ದಾರೆ. ಉಡುಪಿಯ ಐದಕ್ಕೆ ಐದು ವಿಧಾನಸಭಾ ಕ್ಷೇತ್ರದ ಸ್ಥಾನಗಳು ಬಿಜೆಪಿ ಗೆದ್ದಿರುವುದರಿಂದ ಕನಿಷ್ಠ ಎರಡು ಮಂತ್ರಿ ಸ್ಥಾನ ಉಡುಪಿಗೆ ಸಿಗುವ ಭರವಸೆಯಲ್ಲಿದ್ದಾರೆ ಇಲ್ಲಿನ ಶಾಸಕರು.

ಐವರು ಚುನಾಯಿತ ಶಾಸಕರಾದರೆ, ಓರ್ವ ಹಿರಿಯ ವಿಧಾನ ಪರಿಷತ್ತು ಸದಸ್ಯರಿದ್ದು ಇವರಲ್ಲಿ ಯಾರಿಗೆ ಒಲಿಯುತ್ತೆ ಮಂತ್ರಿ ಪಟ್ಟ ಎಂದು ಕಾದು ನೋಡಬೇಕಾಗಿದೆ. ಹಿರಿತನ ಆದರದಲ್ಲಿ ಐದು ಬಾರಿ ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಈ ಬಾರಿ ಮಂತ್ರಿಗಿರಿ ಸಿಗಲೇ ಬೇಕೆಂಬ ಈ ಭಾಗದ ಬಿಜೆಪಿ ಕಾರ್ಯಕತರ ಒಕ್ಕೊರಲ ಕೂಗೂ ಕೇಳಿಬರುತ್ತಿದೆ. ಕಳೆದ 2008 ರಲ್ಲಿ ಬಿಜೆಪಿ ಪೂರ್ಣ ಪ್ರಮಾಣದ ಬಹುಮತ ಪಡೆದು ಅಧಿಕಾರ ದಕ್ಕಿಸಿಕೊಂಡಾಗ ಹಿರಿಯರಾದ ಹಾಲಾಡಿಯವರನ್ನು ಮಂತ್ರಿ ಸ್ಥಾನ ನೀಡಲಾಗಿದೆ ಪ್ರಮಾಣ ವಚನಕ್ಕೆ ಬನ್ನಿ ಎಂದು ಕರೆದು, ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ನೀಡದೆ ಬರಿಗೈಯಲ್ಲಿ ಕಳುಹಿಸಿದ ಬಿಜೆಪಿಯು, ನನಗೆ ಮಾತ್ರವಲ್ಲದೆ ನನ್ನ ಮತದಾರರಿಗೂ ವಂಚಿಸಿದ್ದಾರೆಂದು ಪಕ್ಷಕ್ಕೆ , ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ 2013 ರ ಚುನಾವಣೆಯಲ್ಲಿ ಪಕ್ಷೇತರಾಗಿ ದಾಖಲೆ ಅಂತರದಲ್ಲಿ ಗೆದ್ದಿದ್ದರು. ಆದ್ದರಿಂದ ಹಾಲಾಡಿ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ನೀಡಲೇಬೇಕಾದ ಅನಿರ್ವಾಯ ಬಿಜೆಪಿಗೆ ಇದೆ.

ಇನ್ನೊಂದೆಡೆ ಮೂರು ಬಾರಿ ಶಾಸಕಾರದ, ಕಟ್ಟ ಹಿಂದುತ್ವವಾದಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್‌ಗೆ ಬಹುತೇಕ ಮಂತ್ರಿಗಿರಿ ಸಿಕ್ಕುವುದು ಖಚಿತ ಎನ್ನಲಾಗಿದೆ. ಬಿಲ್ಲವರೆಂಬ ಜಾತಿ ಲೆಕ್ಕಚಾರ, ಪ್ರಖರ ವಾಗ್ಮಿ ಮತ್ತು ಯುವಜನತೆಯನ್ನು ಸೆಳೆಯ ಬಲ್ಲ ಯುವ ನೇತಾರರಾದ ಇವರಿಗೆ ಮಂತ್ರಿಗಿರಿ ನೀಡಿದರೆ ಸಮರ್ಥವಾಗಿ ನಿರ್ವಹಿಸುವರೆಂಬ ಭರವಸೆ ಬಿಜೆಪಿ ಹೈಕಮಾಂಡ್‌ಗೆ ಇದೆ. ಕಳೆದ ಬಾರಿ ಕಾಂಗ್ರೆಸ್ ಸರಕಾರವಿದ್ದಾಗ ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ ಸುನೀಲ್ ಕುಮಾರ್‌ಗೆ ತಮ್ಮದೇ ಸರಕಾರ ಅಧಿಕಾರ ಸಿಕ್ಕಿ ಮಂತ್ರಿಗಿರಿ ಪಡೆದುಕೊಂಡರೆ  ರಾಜ್ಯದಾದ್ಯಂತ ಮಿಂಚಿನಂತೆ ಸಂಚರಿಸಿ ರಾಜ್ಯದ ಅಭಿವೃದ್ಧಿ ಮಾಡುವರೆಂಬ ಕಾರ್ಕಳದ ಜನರ ನೀರಿಕ್ಷೆ . ಹಿಂದು ಸಂಘಟನೆಗಳ ಪ್ರಭಾವಿ ನಾಯಕರ ಕೃಪಾಕಟಾಕ್ಷ ಸುನಿಲ್ ಮೇಲಿದೆ. ಇದು ಇವರಿಗೆ ಇರುವ ಪ್ಲಸ್ ಪಾಯಿಂಟ್.

ಇನ್ನೂ ಉಡುಪಿ ಶಾಸಕ ಕೆ.ರಘುಪತಿ ಭಟ್ ಮೂರನೇ ಬಾರಿ ಶಾಸಕರಾಗಿ ಆಯ್ಕೆ ಆದವರು. ಜಿಲ್ಲೆಯ ಯಾವುದೇ ಸಮಸ್ಯೆ ಇರಲಿ ಅದನ್ನು ಅಧಿಕಾರಿಗಳ, ಹಿರಿಯ ರಾಜಕೀಯಾ ನೇತಾರರಲ್ಲಿ ಚರ್ಚಿಸಿ ಅದನ್ನು ಪರಿಹರಿಸುವಲ್ಲಿ ಪಯ್ರತ್ನಪಡುವ ಶಾಸಕರಲ್ಲಿ ಭಟ್ ಮುಂಚುಣಿಯಲ್ಲಿರುವ ನಾಯಕ. ಆದರೆ ಯಡಿಯೂರಪ್ಪ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡ,  ಬ್ರಾಹ್ಮಣ ಕೋಟದಡಿ ಹಿರಿಯರಾದ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೃಷ್ಣರಾಜ ಕ್ಷೇತ್ರದ ಎಸ್.ಎ. ರಾಮದಾಸ್‌ಗೆ ಆ ಕೋಟಾದಡಿ ಮಂತ್ರಿ ಪದವಿ ಸಿಕ್ಕರೆ ರಘುಪತಿ ಭಟ್‌ಗೆ ಸಾಧ್ಯತೆ ಕಡಿಮೆ, ಆದರೂ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾದ ಶೋಭ ಕರಂದ್ಲಾಜೆಯ ಗೆಲುವಿಗೆ ಉಡುಪಿ ಕ್ಷೇತ್ರದಾದ್ಯಂತ ಮಿಂಚಿನಂತೆ ಸಂಚರಿಸಿ ಇವರ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದು, ಭಟ್ ಪರ ಒಲವು ವ್ಯಕ್ತವಾಗುವ ಸಾಧ್ಯತೆ ಇದೆ. ಇವರು ಜಿಲ್ಲಾ ಕೇಂದ್ರದ ಶಾಸಕರಾಗಿರುವ ಭಟ್‌ಗೆ ಮಂತ್ರಿ ಪಟ್ಟ ನೀಡಿದರೆ ಈ ಹಿಂದೆ ಡಾ.ವಿ.ಎಸ್ ಆಚಾರ್ಯ ಅವರು ನಗರದಲ್ಲಿ ಮಾಡಿದ ಅಭಿವೃದ್ಧಿ ಮತ್ತೆ ರಘುಪತಿ ಭಟ್ ಮುಂದುವರಿಸಬಹುದೆಂದು ಉಡುಪಿ ಜನರ ಆಕಾಂಕ್ಷೆಯಾಗಿದೆ.

ಮೋಗವೀರ ಸಮುದಾಯದಡಿ ಇರುವ ಏಕೈಕ ಶಾಸಕ ಕಾಪುವಿನ ಲಾಲಾಜಿ ಮೆಂಡನ್. ಇವರೂ ಕೂಡ ಮೂರು ಬಾರಿ ಗೆದ್ದು ತನಗೂ ಮಂತ್ರಿ ಸ್ಥಾನ ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಶಾಂತ ಸ್ವಭಾವದ ಇವರಿಗೆ ಎಲ್ಲಾ ಜಾತಿ ಧರ್ಮದ ಜನರು ಇವರ ಕಾರ್ಯವೈಖರಿ ಮೆಚ್ಚುತ್ತಾರೆ. ಪ್ರಭಾವಿ ಮೋಗವೀರ ಸಮುದಾಯದವರು ಹೆಚ್ಚಾಗಿ ಬಿಜೆಪಿ ಬೆಂಬಲಿಸುತ್ತಿರುವುದು ಹಾಗೂ ಯಡಿಯೂರಪ್ಪರವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿವುದು ಇವರಿಗೂ ಗೂಟದ ಕಾರೆರುವ ನೀರಿಕ್ಷೆಯಿದೆ.

ಬಿಜೆಪಿಯ ಶಿಸ್ತಿನ ಸಿಪಾಯಿ , ರಾಜಕೀಯವನ್ನು ಅರೆದು ಕುಡಿದ ಈ ಭಾಗದ ಪ್ರಭಾವಿ ಬಿಲ್ಲವ ಮುಂದಾಳು, ವಿಧಾನ ಪರಿಷತ್ತು ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ನಿರ್ವಹಿಸಿದ ,ಸರಳ ವ್ಯಕ್ತಿತ್ವದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೂ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಕೋಟದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರಿಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಆಯೋಜಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಅದರ ಕಾರ್ಯ ರೂಪಕ್ಕೆ ಶ್ರಮಿಸುವ ಕೋಟ ಶ್ರೀನಿವಾಸ ಪೂಜಾರಿಗೂ ಮಂತ್ರಿಗಿರಿ ದಕ್ಕಿದರೂ ಜಿಲ್ಲೆಗೆ ಹೆಸರು ಬರುವಲ್ಲಿ ಯಾವುದೇ ಸಂಶಯವಿಲ್ಲ.

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಬಂಟ ಸಮುದಾಯದಡಿ, ಈಗಾಗಲೇ ಹಲವಾರು ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ, ಕೊಲ್ಲೂರು ದೇವಸ್ಥಾನದ ಆಡಳಿತ ಮೊಕ್ತೆಸರರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಇವರಿಗಿದೆ.
ನನಗೂ ಮಂತ್ರಿ ಸ್ಥಾನ ಸಿಕ್ಕಿದರೆ, ಪಕ್ಷ ಜವಾಬ್ದಾರಿ ನೀಡಿದರೆ ಮಂತ್ರಿಯಾಗಿ ನಿರ್ವಹಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ಯಾವ ಶಾಸಕರಿಗೆ ಮಂತ್ರಿಗಿರಿ ಒಲಿಯುವ ಅದೃಷ್ಟವಿದೆಂದು ಕಾದುನೋಡಬೇಕು. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನಿಂದ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಹಲವಾರು ಮೂಲಭೂತ ಸೌಕರ್ಯದ ಸಮಸ್ಯೆಗಳು ಪರಿಹಾರವಾಗಲಿಯೆಂದು ಉಡುಪಿ ಜನರ ಆಕಾಂಕ್ಷೆಯಾಗಿದೆ.

Leave a Reply

Your email address will not be published. Required fields are marked *

error: Content is protected !!