ಉಡುಪಿ: ಚಂಡಮಾರುತ ಅಬ್ಬರ ಜಿಲ್ಲೆಯಲ್ಲಿ ಎರಡು ಬಲಿ
ಉಡುಪಿ:ಕಳೆದ ಎರಡು ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದಿಂದ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತಿದ್ದು, ಮಳೆ-ಗಾಳಿಗೆ ಎರಡು ಜೀವಗಳು ಬಲಿಯಾಗಿವೆ.
ಕಾಪು ತಾಲೂಕಿನ ಕುರ್ಕಾಲು ಗ್ರಾಪಂ ವ್ಯಾಪ್ತಿಯ ಕುಂಜಾರುಗಿರಿಯ ಚಂದ್ರಶೇಖರ ಎಂಬವರ ಪತ್ನಿ ಸುಲೋಚನಾ (42) ನಿನ್ನೆ ಹುಲ್ಲು ತರಲೆಂದು ಗದ್ದೆಗೆ ತೆರಳಿದ್ದ ಅವರು ಸಂಜೆ ವೇಳೆ ಶಂಖತೀರ್ಥ ಎಂಬಲ್ಲಿ ತುಂಬಿದ ತೋಡೊಂದನ್ನು ದಾಟುವಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇನ್ನೊಂದು ಘಟನೆ ಉಡುಪಿ ತಾಲೂಕು ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ಸಾಂತಜೆಡ್ಡು ಎಂಬಲ್ಲಿ ರಾತ್ರಿ ೯ಗಂಟೆಯ ಸುಮಾರಿಗೆ ಮರವೊಂದು ಮನೆಯ ಮೇಲೆ ಉರುಳುವಾಗ ಮಳೆಗಾಗಿ ಆ ಮನೆಯಲ್ಲಿ ಆಶ್ರಯ ಪಡೆದಿದ್ದ ಕುಕ್ಕೆಹಳ್ಳಿಯ ರಿಕ್ಷಾ ಚಾಲಕರಾದ ರವೀಂದ್ರ ಕುಲಾಲ್ (35) ಅವರು ಅದರಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.
ರವೀಂದ್ರ ಕುಲಾಲ್ ಅವರು ಮನೆಗೆ ಹಿಂದಿರುಗುವ ವೇಳೆ ಧಾರಾಕಾರ ಮಳೆ ಸುರಿದುದರಿಂದ ಗಾಳಿ-ಮಳೆಗೆ ಮಾರ್ಗ ಸರಿಯಾಗಿ ಕಾಣಿಸದ ಕಾರಣ ರಿಕ್ಷಾವನ್ನು ನಿಲ್ಲಿಸಿ ಪರಿಚಯದ ದಿವಾಕರ ಶೆಟ್ಟಿ ಎಂಬವರ ಮನೆಯ ಅಂಗಳದಲ್ಲಿ ನಿಂತಿದ್ದಾಗ ಪಕ್ಕದ ಮನೆಯ ಮರವೊಂದು ಮನೆಯ ಮೇಲೆ ಉರುಳಿತ್ತು. ಆಗ ಅದರ ದೊಡ್ಡ ಗೆಲ್ಲೊಂದು ರವೀಂದ್ರ ಅವರಿಗೆ ಬಡಿದು ಅದು ಮೃತ ಪಟ್ಟರೆಂದು ಕುಕ್ಕೆಹಳ್ಳಿಯ ಗ್ರಾಮ ಲೆಕ್ಕಿಗ ಗುರುಪ್ರಸಾದ್ ತಿಳಿಸಿದರು.