ಇದೆ ರೀತಿ ಗೋವು ಕಳ್ಳತನ ಮುಂದುವರಿದರೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ಅಪಾಯವಿದೆ: ಪೇಜಾವರ ಶ್ರೀ
ಮಂಗಳೂರು: ಅವಿಭಜಿತ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಅವ್ಯಾಹತ ಅಕ್ರಮ ಗೋಸಾಗಾಟ, ಹಾಡುಹಗಲಲ್ಲೇ ದನಕರುಗಳ ಕಳ್ಳತನ ನಡೆಯುತ್ತಿದ್ದು ಜಿಲ್ಲಾಡಳಿತದ ತುರ್ತು ಕ್ರಮಕ್ಕೆ ಪೇಜಾವರ ಶ್ರೀ ಒತ್ತಾಯ.
ಒಂದೆಡೆ ಕೊರೊನಾ ನಿರ್ಬಂಧದಿಂದ ಜನತೆ , ಸರಕಾರಿ ವ್ಯವಸ್ಥೆಗಳು ಹೈರಾಣಾಗಿ ಹೋಗಿವೆ . ಈ ರೋಗದಿಂದ ಮುಕ್ತಿಗಾಗಿ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಆದರೆ ಇದೇ ಹೊತ್ತಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಗೋಕಳ್ಳರು ಅವ್ಯಾಹತವಾಗಿ ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆ ನಡೆಸುತ್ತಿರುವುದು ಸಮಾಜದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.
ಕಳೆದೊಂದು ತಿಂಗಳಿನಿಂದ ಕರಾವಳಿ ಜಿಲ್ಲೆಗಳಲ್ಲಿ ರಾಜಾರೋಷವಾಗಿ ಹಳ್ಳಿಗಳಿಂದ ಹಾಗೂ ನಗರ ಭಾಗದ ಗೋಶಾಲೆಗಳಿಂದ ಗೋವುಗಳನ್ನು ಹೊತ್ತೊಯ್ಯುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ . ಈ ಬಗ್ಗೆ ಹಿಂದೂ ಸಂಘಟನೆಗಳು ಹಾಗೂ ಅನೇಕ ರೈತರು ತಮ್ಮಲ್ಲಿ ನೋವು ದುಃಖ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ . ಕೆಲವರು ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿದ್ದಾರೆ. ಗೋಕಳ್ಳರಿಂದಾಗಿ ಅವರೆಲ್ಲ ನಿದ್ರೆಯಿಲ್ಲದ ರಾತ್ರಿಗಳನ್ನು ಕಾಣುವಂತಾಗಿದೆ . ಗೋಕಳ್ಳತನದಿಂದಾಗಿ ಮುಂದೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ಅಪಾಯವೂ ಇದೆ.
ಆದ್ದರಿಂದ ಸರಕಾರ ಜಿಲ್ಲಾಡಳಿತಗಳು , ಜನಪ್ರತಿನಿಧಿಗಳು ಅಕ್ರಮ ಗೋಸಾಗಾಟ ತಡೆಯಬೇಕು . ಅಲ್ಲಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಹಾಗೂ ಗೋಕಳ್ಳರನ್ನು ಗೋ ಹಂತಕರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಒತ್ತಾಯಿಸಿದ್ದಾರೆ.