ಬ್ರಹ್ಮಾವರ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ, ಹಿಟಾಚಿ ಸಹಿತ ಮೂರು ವಾಹನ ವಶಕ್ಕೆ
ಉಡುಪಿ (ಉಡುಪಿ ಟೈಮ್ಸ್ ವರದಿ ): ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮ, ಇಂಬ್ರಗೋಳಿಯಲ್ಲಿ ನಡೆಯುತ್ತಿದ್ದ ಸುನಿಲ್ ಶೆಟ್ಟಿ ಒಳಮಡಿ ಹಾಗೂ ಧನಂಜಯ ಆಮೀನ್ ರವರಿಗೆ ಸೇರಿದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಗಣಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ನಾಲ್ಕು ಲಾರಿ, ಹಿಟಾಚಿ ಸಹಿತ ಮೂರು ಕಾರುಗಳನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿಯ ಮೇರೆಗೆ ಗಣಿ ಇಲಾಖೆಯ ಅಧಿಕಾರಿ ರಾನ್ಜಿ ನಾಯಕ್ ಹಾಗು ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಸಹಕಾರದೊಂದಿಗೆ ರಾತ್ರಿ 12 .30 ಗಂಟೆಗೆ ದಾಳಿ ನಡೆಸಿದ್ದರು. ಅಧಿಕಾರಿಗಳ ದಾಳಿ ನಡೆಸುವುದರ ಬಗ್ಗೆ ಸುಳಿವು ದೊರೆಯುತ್ತಿದ್ದಂತೆ ಯಾಂತ್ರಿಕೃತ ಮರಳುಗಾರಿಕೆಗೆ ಬಳಸುತ್ತಿದ್ದ ಹಿಟಾಚಿ ಯಂತ್ರವನ್ನ ನದಿಗೆ ಇಳಿಸಿದ್ದರು. ಈ ಬಗ್ಗೆ ಮೊದಲೇ ಮಾಹಿತಿ ಇದ್ದ ಗಣಿ ಇಲಾಖೆ ಅಧಿಕಾರಿಗಳು ಹಿಟಾಚಿ ಯಂತ್ರವನ್ನು ನದಿಗೆ ಇಳಿಸಿರುವ ಜಾಡು ಹಿಡಿಯುವಲ್ಲಿ ಯಶಸ್ವಿಯಾದರು.
ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ನಾಲ್ಕು ಲಾರಿ, ಹಿಟಾಚಿ ಸಹಿತ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಮಡಿಸಾಲ್ ಹೊಳೆಯ ಪಕ್ಕದ ಗದ್ದೆಯೊಂದರಲ್ಲಿ ಎರಡು ಮೆಟ್ರಿಕ್ ಟನ್ ಮರಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.