3ನೇ ಬಾರಿ ಸಿಎಂ ಆಗುವತ್ತ ದೇವೇಂದ್ರ ಫಡ್ನವೀಸ್- ಕಮಲ ಪಾಳಯದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಮುಂಬೈ: ಮಹಾ ವಿಕಾಸ್ ಅಘಾಡಿ ಸರ್ಕಾರ ಕೊನೆಗೂ ಪತನವಾಗುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನಲ್ಲಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಬಿಜೆಪಿ ಶಾಸಕರು ಸೇರಿದಂತೆ ಹಲವು ಪಕ್ಷದ ಮುಖಂಡರು ಪರಸ್ಪರ ಶುಭಾಶಯ ಕೋರಿದರು. ಅವರಲ್ಲಿ ಹಲವರು ಫಡ್ನವಿಸ್ ಶೀಘ್ರದಲ್ಲೇ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳಿಂದ ದೇವೇಂದ್ರ ಫಡ್ನವೀಸ್ ಯಾವಾಗಲಾದರೂ ಸದನಕ್ಕೆ ಮರಳಿಯೇ ಮರಳುತ್ತೇನೆ ಎಂಜು ಹೇಳುತ್ತಿದ್ದಾರೆ. ಅವರು ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬರುತ್ತಾರೆ ಎಂದು ಬಿಜೆಪಿ ಶಾಸಕ ನಿತೇಶ್ ರಾಣೆ ಹೇಳಿದ್ದಾರೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ ಪಾಟೀಲ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಸಿಹಿ ತಿನ್ನಿಸಿದರು

ಇಂದು ಮುಂಬೈನಲ್ಲಿ ಸಭೆ ಸೇರುವಂತೆ ಬಿಜೆಪಿ ತನ್ನ ಎಲ್ಲಾ ಶಾಸಕರನ್ನು ಕೇಳಿಕೊಂಡಿದೆ. ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಂದಿನ ಕ್ರಮವನ್ನು ನಿರ್ಧರಿಸಲಿದ್ದಾರೆ ಎಂದು ಪಾಟೀಲ್ ಹೇಳಿದರು. 

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಗೋವಾದ ರೆಸಾರ್ಟ್‌ಗೆ ಆಗಮಿಸಿದ ಬಂಡಾಯ ಶಾಸಕರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ಹಿನ್ನೆಲೆಯಲ್ಲಿ ತಮ್ಮ ಮುಂದಿನ ಕ್ರಮದ ಕುರಿತು ಚರ್ಚಿಸಲು ಅಲ್ಲಿ ಸಭೆ ನಡೆಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಸ್ಥಾನದಿಂದ ಠಾಕ್ರೆ ನಿರ್ಗಮಿಸಿದ ನಂತರ ಬಂಡಾಯ ಪಾಳಯದಲ್ಲಿರುವ ಎಲ್ಲರೂ ಸಂತೋಷವಾಗಿಲ್ಲ ಎಂದು ಭಿನ್ನಮತೀಯ ಶಾಸಕರೊಬ್ಬರು ಹೇಳಿದ್ದಾರೆ.

ನಿನ್ನೆ ಸಂಜೆ ಠಾಕ್ರೆ ಅವರು ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು, ರಾಜೀನಾಮೆ ಪತ್ರ ಅಂಗೀಕರಿಸಿದ ರಾಜ್ಯಪಾಲರು ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಕೇಳಿಕೊಂಡಿದ್ದಾರೆ. 

ಬಿಜೆಪಿಯ ಕೇಂದ್ರ ನಾಯಕರು ‘ಕರ್ಮ’ ಶಬ್ದವನ್ನು ಬಳಸಿಕೊಂಡು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಪರಂಪರೆಯನ್ನು ಉದ್ಧವ್ ಠಾಕ್ರೆ ಮುರಿದಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿ ಟೀಕಿಸುತ್ತಿದ್ದಾರೆ. 

ಕರ್ಮ ಯಾರನ್ನೂ ಬಿಡುವುದಿಲ್ಲ ಎಂದು ರಾಜ್ಯದಲ್ಲಿ ಪಕ್ಷದ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. “ಬಾಳಾಸಾಹೇಬರು ಅಧಿಕಾರದಲ್ಲಿ ಇಲ್ಲದಿದ್ದರೂ ಸರ್ಕಾರಗಳನ್ನು ನಿಯಂತ್ರಿಸಬಲ್ಲ ವ್ಯಕ್ತಿಯಾಗಿದ್ದರು. ಮತ್ತೊಂದೆಡೆ, ಅವರ ಮಗ ಅಧಿಕಾರದಲ್ಲಿದ್ದರೂ ತನ್ನ ಪಕ್ಷವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇಂದು ಸರ್ಕಾರ ಪತನವಾಗಿದೆ ಎಂದು ಬಿಜೆಪಿಯ ಐಟಿ ವಿಭಾಗ ಉಸ್ತುವಾರಿ ಅಮಿತ್ ಮಾಳವಿಯಾ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!