ಕ್ರೈಸ್ತರ ಮೇಲಿನ ದಾಳಿ- ವಿಚಾರಣೆಗೆ ‘ಸುಪ್ರೀಂ’ ಅಸ್ತು
ನವದೆಹಲಿ, ಜೂ.27: ಕ್ರೈಸ್ತರ ಮೇಲಿನ ದಾಳಿಗೆ ಸಂಬಂಧಿಸಿದ ವಿಚಾರಣೆಗೆ ‘ಸುಪ್ರೀಂ’ ಅಸ್ತು ಎಂದಿದೆ.
ದೇಶದಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಪಾದ್ರಿಗಳ ಮೇಲೆ ಹೆಚ್ಚುತ್ತಿರುವ ದಾಳಿ ಹಾಗೂ ದ್ವೇಷದ ಅಪರಾಧಗಳನ್ನು ತಡೆಯಲು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿ ಅರ್ಜಿಯ ವಿಚಾರಣೆಗೆ ಇಂದು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ಅರ್ಜಿದಾರರ ಪರ ವಕೀಲರಾದ ಕಾಲಿನ್ ಗೊನ್ಸಾಲ್ವಿಸ್ ಅವರು, ದೇಶದಾದ್ಯಂತ ಪ್ರತಿ ತಿಂಗಳು ಕ್ರಿಶ್ಚಿಯನ್ ಸಂಸ್ಥೆಗಳು ಮತ್ತು ಪಾದ್ರಿಗಳ ಮೇಲೆ ಸರಾಸರಿ 45 ರಿಂದ 50 ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ. ಈ ವರ್ಷ ಮೇ ತಿಂಗಳಿನಲ್ಲಿಯೇ 57 ದಾಳಿಗಳು ನಡೆದಿವೆ. ಈ ಬಗ್ಗೆ ಅರ್ಜಿಯ ತುರ್ತು ವಿಚಾರಣೆಗಾಗಿ ಪಟ್ಟಿ ಮಾಡುವಂತೆ ಕೋರಿದರು.
ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನು ಒಳಗೊಂಡ ರಜಾಕಾಲದ ಪೀಠವು, ‘ನೀವು ಹೇಳುತ್ತಿರುವಂತೆ ದಾಳಿಗಳು ಸಂಭವಿಸುತ್ತಿದ್ದರೆ ಅದು ದುರದೃಷ್ಟಕರ. ನಿಮ್ಮ ಕೋರಿಕೆಯ ಅರ್ಜಿಯನ್ನು ಪುನಾ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ನೀವು ಅದನ್ನು ಖಚಿತಪಡಿಸಿಕೊಳ್ಳ ಬಹುದು’ ಎಂದು ಹೇಳಿತು.
ಪೀಠವು, ಬೇಸಿಗೆ ರಜೆಯ ನಂತರ ನ್ಯಾಯಾಲಯಗಳ ಕಲಾಪಗಳನ್ನು ಜುಲೈ 11ರಂದು ಪುನರಾರಂಭಿಸುವಾಗ ಅದೇ ದಿನ ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿತು. ಹಾಗೂ ತೆಹ್ಸೀನ್ ಪೂನಾವಾಲಾ ತೀರ್ಪಿನಲ್ಲಿರುವ ಮಾರ್ಗಸೂಚಿಗಳ ಅನುಷ್ಠಾನ ಕೋರಿದ ಅರ್ಜಿಯಲ್ಲಿ, ರಾಷ್ಟ್ರದಾದ್ಯಂತ ದ್ವೇಷದ ಅಪರಾಧಗಳನ್ನು ಗಮನಿಸಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸ ಬೇಕು ಎಂದು ಮನವಿ ಮಾಡಲಾಗಿದೆ.