ಬೆಂಗಳೂರು: ಮೂರೇ ದಿನದಲ್ಲಿ ಕಿತ್ತುಹೋದ ಕೋಟಿ ವೆಚ್ಚದ ರಸ್ತೆ- ಮಾಹಿತಿ ಕೇಳಿದ ಪ್ರಧಾನಿ ಕಚೇರಿ

ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದ ರೂ.6 ಕೋಟಿ ವೆಚ್ಚದ ರಸ್ತೆ ಮೂರೇ ದಿನದಲ್ಲಿ ಕಿತ್ತುಹೋಗಿದೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಪ್ರಧಾನಿ ಕಚೇರಿ ಗುರುವಾರ ಸಂಜೆ ನಿರ್ದೇಶನ ನೀಡಿದೆ.
 
ರೂ.33 ಸಾವಿರ ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆಗಾಗಿ ಜೂನ್‌ 20ರಂದು ಪ್ರಧಾನಿ ಅವರು ಬೆಂಗಳೂರಿಗೆ ಬಂದಿದ್ದರು. ಪ್ರಧಾನಿ ಸಾಗುವ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ ರೂ.24 ಕೋಟಿ ವೆಚ್ಚ ಮಾಡಿತ್ತು. ಜ್ಞಾನಭಾರತಿಯ ಡಾ.ಬಿ.ಆರ್. ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕಾನಮಿಕ್ಸ್‌ ಕ್ಯಾಂಪಸ್‌ ಬಳಿ ರೂ. 6 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿತ್ತು.

ಆ ರಸ್ತೆ ಒಂದೇ ದಿನದಲ್ಲಿ ಕುಸಿದುಹೋಗಿದೆ.‘ಪ್ರಧಾನಿ ಸಾಗಿದ ರಸ್ತೆಯ ಸ್ಥಿತಿ ನೋಡಿ. ಇದು ಬಿಬಿಎಂಪಿಯ ಕಳಪೆ ಕಾಮಗಾರಿಗೆ ಸಾಕ್ಷಿ. ಶೇ 40 ಭ್ರಷ್ಟಾಚಾರಕ್ಕೆ ಮತ್ತೊಂದು ಉದಾಹರಣೆ’ ಎಂದು ಕುಸಿದ ರಸ್ತೆಯ ಚಿತ್ರವನ್ನು ಟ್ಯಾಗ್‌ ಮಾಡಿದ್ದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಈ ಬಗ್ಗೆ ಪ್ರಧಾನಿ  ಸಚಿವಾಲಯಕ್ಕೆ ಮಾಹಿತಿ ಹೋಗಿತ್ತು.

 ಮೋದಿ ಮೈಸೂರು ಭೇಟಿಗೆ ರೂ.20 ಕೋಟಿ ವೆಚ್ಚ: ಇದರಿಂದ ಜಿಲ್ಲೆಗೆ ಸಿಕ್ಕಿದ್ದೇನು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಭವನದಲ್ಲಿರುವಾಗಲೇ ಅವರಿಗೆ ದೂರವಾಣಿ ಕರೆ ಮಾಡಿದ್ದ ಪ್ರಧಾನಿ  ಕಚೇರಿಯ ಅಧಿಕಾರಿಗಳು ಸಮಗ್ರ ವಿವರಣೆ ಕೇಳಿದರು. ಇದರಿಂದ ಮುಖ್ಯಮಂತ್ರಿ ಅವರು ಮುಜುಗರಕ್ಕೆ ಒಳಗಾದರು. ಕಳಪೆ ಕಾಮಗಾರಿ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಈ ಪ್ರದೇಶದಲ್ಲಿ ನೀರಿನ ಪೈಪ್ ಸೋರಿಕೆಯಿಂದ ರಸ್ತೆ ಕುಸಿದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಜಲಮಂಡಳಿಯವರು ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಹಾಕಿದ್ದರು. ಬಿಬಿಎಂಪಿ ಅಧಿಕಾರಿಗಳು ಅದರ ಮೇಲೆ ಡಾಂಬರು ಹಾಕಿದ್ದಾರೆ. ಭಾರ ತಾಳಲಾರದೆ ರಸ್ತೆ ಕುಸಿದಿದೆ. ಈಗ ಎರಡು ಇಲಾಖೆಗಳ ಅಧಿಕಾರಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ವರದಿ ಬಂದ ಕೂಡಲೇ, ಕಳಪೆ ಕೆಲಸ ಮಾಡಿದ ಅಧಿಕಾರಿಯನ್ನು ಅಮಾನತು ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ. 

Leave a Reply

Your email address will not be published. Required fields are marked *

error: Content is protected !!