ಮಹಾರಾಷ್ಟ್ರ: ಮುನಿಸಿಕೊಂಡಿರುವ ಶಾಸಕರಿಗೆ ಪಕ್ಷದ ಬಾಗಿಲು ತೆರೆದಿದೆ- ಸಂಜಯ ರಾವುತ್ 

ಮುಂಬೈ: ಸರ್ಕಾರ ಕೈತಪ್ಪಿದರೂ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ನಿಲುವಿಗೆ ಶಿವಸೇನಾ ಬಂದಿದೆ. ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದಿಂದ ಹೊರ ನಡೆಯಲು ಸಿದ್ಧ ಎಂದು ಸೇನಾ ಹೇಳಿದೆ. ಆದರೆ, ಅಸ್ಸಾಂನಲ್ಲಿ ತಂಗಿರುವ ಸೇನಾ ಶಾಸಕರು 24 ತಾಸುಗಳೊಳಗೆ ಮುಂಬೈಗೆ ಬರಬೇಕು ಎಂದು ಪಕ್ಷದ ಮುಖ್ಯ ವಕ್ತಾರ ಸಂಜಯ ರಾವುತ್‌ ಗುರುವಾರ ಹೇಳಿದ್ದಾರೆ. 

ಸೇನಾ ನಿಲುವಿನಲ್ಲಿ ಆಗಿರುವ ದಿಢೀರ್ ಬದಲಾವಣೆಯು ಮಿತ್ರ ಪಕ್ಷಗಳನ್ನು ಅಚ್ಚರಿಗೆ ಕೆಡವಿದೆ. ಮೈತ್ರಿಕೂಟದ ಸರ್ಕಾರವು ಅವಧಿ ಪೂರೈಸಬೇಕು ಎಂಬ ಅಭಿಪ್ರಾಯವನ್ನು ಎನ್‌ಸಿಪಿ ವ್ಯಕ್ತಪಡಿಸಿದೆ. ಮುನಿಸಿಕೊಂಡಿರುವ ಶಾಸಕರಿಗೆ ಪಕ್ಷದ ಬಾಗಿಲು ತೆರೆದಿದೆ. ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದು ಎಂದು ರಾವುತ್ ಹೇಳಿದ್ದಾರೆ.

ಮಹಾರಾಷ್ಟ್ರದ ಸಚಿವ ಮತ್ತು ಸೇನಾದ ಪ್ರಭಾವಿ ನಾಯಕ ಏಕನಾಥ ಶಿಂಧೆ ಅವರು ಪಕ್ಷದ ಹಲವು ಶಾಸಕರ ಜತೆಗೂಡಿ ಬಂಡಾಯ ಎದ್ದಿದ್ದಾರೆ. ಹೀಗಾಗಿ ಎಂವಿಎ ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದೆ. ಸೇನಾದ ಇನ್ನೂ ಮೂವರು ಶಾಸಕರು, ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ಪಂಚತಾರಾ ಹೋಟೆಲ್‌ಗೆ ಗುರುವಾರ ತಲುಪಿದ್ದಾರೆ ಎನ್ನಲಾಗಿದೆ. ಶಿಂಧೆ ಅವರ ಜತೆಗೆ ಸೇನಾದ 37 ಶಾಸಕರು ಮತ್ತು ಪಕ್ಷೇತರರಾಗಿ ಗೆದ್ದಿರುವ ಒಂಬತ್ತು ಶಾಸಕರು ಇದ್ದಾರೆ ಎಂದು ಹೇಳಲಾಗುತ್ತಿದೆ. ‘ಬಂಡಾಯ’ ಶಾಸಕರ ಪರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಶಿಂಧೆ ಅವರಿಗೆ ನೀಡುವ ತೀರ್ಮಾನವನ್ನು ಅವಿರೋಧವಾಗಿ ತೆಗೆದುಕೊಳ್ಳಲಾಗಿದೆ ಎಂದು ಶಿಂಧೆ ಅವರ ಕಚೇರಿಯು ತಿಳಿಸಿದೆ. 

ಶಿವಸೇನಾದ ಶಾಸಕರಾದ ದೀಪಕ್‌ ಕೇಸ್ಕರ್‌, ಮಂಗೇಶ್‌ ಕುಡಾಲ್ಕರ್‌ ಮತ್ತು ಸದಾ ಸರವನ್‌ಕರ್‌ ಅವರು ಗುರುವಾರ ಗುವಾಹಟಿ ತಲುಪಿದ್ದಾರೆ ಎಂದು ಶಿಂಧೆ ಅವರ ಆಪ್ತರೊಬ್ಬರು ತಿಳಿಸಿದ್ದಾರೆ. ಸಚಿವ ಗುಲಾಬ್‌ರಾವ್‌ ಪಾಟೀಲ್‌ ಸೇರಿ ನಾಲ್ವರು ಶಾಸಕರು ಬುಧವಾರ ಸಂಜೆ ಗುವಾಹಟಿಗೆ ತಲುಪಿದ್ದರು. ಇವರು ತಲುಪಿದ ಬಳಿಕ, ತಮಗೆ ಪಕ್ಷೇತರರು ಸೇರಿ 46 ಶಾಸಕರ ಬೆಂಬಲ ಇದೆ ಎಂದು ಶಿಂಧೆ ಹೇಳಿಕೊಂಡಿದ್ದರು. 

ಸೇನಾದ 35 ಶಾಸಕರ ಸಹಿ ಇರುವ ಪತ್ರವೊಂದನ್ನು ಉಪ ಸ್ಪೀಕರ್‌ಗೆ ಶಿಂಧೆ ಅವರು ಕಳುಹಿಸಿದ್ದಾರೆ. ಪಕ್ಷದ ಮುಖ್ಯ ಸಚೇತಕರಾಗಿರುವ ಸುನಿಲ್‌ ಪ್ರಭು ಅವರ ಸ್ಥಾನದಲ್ಲಿ ಭರತ್‌ ಗೋಗಾವಾಲೆ ಅವರನ್ನು ನೇಮಿಸುವಂತೆ ಪತ್ರದಲ್ಲಿ ಹೇಳಲಾಗಿದೆ. ಸದನದಲ್ಲಿ ಸೇನಾ ನಾಯಕರಾಗಿ ಅಜಯ್‌ ಚೌಧರಿ ಅವರನ್ನು ನೇಮಿಸಿದ್ದಕ್ಕೆ ಉಪ ಸ್ಪೀಕರ್‌ ನರಹರಿ ಝಿರ್‌ವಾಲ್‌ ಮಾನ್ಯತೆ ನೀಡಿದ್ದಾರೆ. ಸಭಾ ನಾಯಕರಾಗಿದ್ದ ಶಿಂಧೆ ಅವರ ಸ್ಥಾನದಲ್ಲಿ ಅಜಯ್‌ ಅವರನ್ನು ನೇಮಿಸಲಾಗಿದೆ ಎಂದು ಉದ್ಧವ್‌ ನೇತೃತ್ವದ ಶಿವಸೇನಾ ಹೇಳಿತ್ತು.

Leave a Reply

Your email address will not be published. Required fields are marked *

error: Content is protected !!