40 ಶಿವಸೇನೆ ಶಾಸಕರು ನನ್ನ ಜೊತೆಗೇ ಇದ್ದು, ಯಾರೂ ಪಕ್ಷ ತೊರೆಯುತ್ತಿಲ್ಲ- ಏಕನಾಥ್ ಶಿಂಧೆ
ಗುವಾಹಟಿ: ಪಕ್ಷದ 40 ಶಾಸಕರು ನನ್ನೊಂದಿಗೇ ಇದ್ದು, ಎಲ್ಲರೂ ಅಸ್ಸಾಂ ತಲುಪಿದ್ದಾರೆ. ಬಾಳ ಸಾಹೇಬ್ ಠಾಕ್ರೆಯ ಹಿಂದುತ್ವವನ್ನು ನಾವು ಪಾಲಿಸುತ್ತಿದ್ದೇವೆ. ಮುಂದೆಯೂ ಸಹ ಪಾಲಿಸುತ್ತೇವೆ. ಬಾಳ ಸಾಹೇಬ್ ಠಾಕ್ರೆಯ ಶಿವಸೇನೆಯನ್ನು ನಾವು ತೊರೆದಿಲ್ಲ, ಮುಂದೆಯೂ ತೊರೆಯುವುದೂ ಇಲ್ಲ ಎಂದು ಶಿವಸೇನೆ ನಾಯಕ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿರುವ ಹೋಟೆಲ್‌ನಲ್ಲಿದ್ದ ಶಿವಸೇನೆ ಶಾಸಕರು ಬುಧವಾರ ಅಸ್ಸಾಂನ ಗುವಾಹಟಿಗೆ ತೆರಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಏಕನಾಥ ಶಿಂಧೆ, “ನಾವು ಬಾಳ ಸಾಹೇಬ್ ಠಾಕ್ರೆಯ ಶಿವಸೇನೆ ತೊರೆದಿಲ್ಲ. ಮುಂದೆಯೂ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ನಡೆದಿತ್ತು. ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರ ಬೆಂಬಲಿತ ಅಭ್ಯರ್ಥಿಗೆ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿತ್ತು. ಇದಕ್ಕೆ ಅಡ್ಡಮತದಾನ ಕಾರಣ ಎಂದು ವಿಶ್ಲೇಷಿಸಲಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಕಂಡು ಬಂದಿವೆ.
ಏಕನಾಥ ಶಿಂಧೆ ಜೊತೆಗೆ ಶಿವಸೇನೆ, ಪಕ್ಷೇತರ ಶಾಸಕರು ಸೇರಿ ಒಟ್ಟು 33 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿತ್ತು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿತ್ತು. ಇದರಂತೆ ಮಂಗಳವಾರ ತಮ್ಮ ನಿವಾಸದಲ್ಲಿ ಶಿವಸೇನೆ ಶಾಸಕರ ಸಭೆಯನ್ನು ನಡೆಸಿದ್ದರು. ಸಭೆ ಗುಜರಾತ್ ಹೋಟೆಲ್ ನಲ್ಲಿದ್ದ ಶಾಸಕರನ್ನು ಮುಂಬೈನ ಖಾಸಗಿ ಹೋಟೆಲ್‌ಗೆ ಕಳಿಸಲಾಗಿತ್ತು. ಬಂಡಾಯ ಎದ್ದಿರುವ ಏಕನಾಥ ಶಿಂಧೆ ಮನವೊಲಿಸುವ ಕಾರ್ಯವನ್ನು ಶಿವಸೇನೆಯ ನಾಯಕರು ಮಾಡುತ್ತಿದ್ದಾರೆ.
ಈ ನಡುವೆ ಉದ್ಧವ್ ಠಾಕ್ರೆ ಸಹ ಮಂಗಳವಾರ 10 ನಿಮಿಷ ಏಕನಾಥ ಶಿಂಧೆ ಜೊತೆ ಮಾತನಾಡಿದ್ದಾರೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ.