ಎಸ್’ಡಿಪಿಐ, ಪಿಎಫ್ಐ ನಿಷೇಧಕ್ಕೆ ಸರ್ಕಾರ ಚಿಂತನೆ: ಬೊಮ್ಮಾಯಿ
ಬೆಂಗಳೂರು: ಹಿಂಸಾಚಾರದಲ್ಲಿ ಪಿಎಎಫ್ಐ, ಎಸ್’ಡಿಪಿಐ ಪಾತ್ರ ಇರುವುದು ತನಿಖೆಯಲ್ಲಿ ಸಾಬೀತಾಗಿದ್ದೇ ಆದರೆ, ಸಂಘಟನೆಗಳ ನಿಷೇಧದ ಬಗ್ಗೆ ಪರಿಶೀಲಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಡಿಜೆ.ಹಳ್ಳಿ ಹಿಂಸಾಚಾರ ಕುರಿತಂತೆ ಹೇಳಿಕೆ ನೀಡಿರುವ ಅವರು, ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೂ ಮುನ್ನು ಕೆಲ ಪ್ರಕ್ರಿಯೆಗಳಿದ್ದು, ಅವುಗಳನ್ನು ನಾವು ಅನುಸರಿಸಬೇಕಿದೆ. ಮಂಗಳೂರಿನಲ್ಲಿ ನಡೆದಿದ್ದ ಗಲಭೆ ವೇಳೆಯೂ ಎಸ್’ಡಿಪಿಐ ಹಾಗೂ ಪಿಎಫ್ಐ ವಿರುದ್ಧ ಆರೋಪಗಳು ಕೇಳಿ ಬಂದಿತ್ತು. ಇದಲ್ಲದೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ ಅವರ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ವೇಳೆಯೂ ಇದೇ ಸಂಘಟನೆಗಳ ಮೇಲೆ ಆರೋಪ ಕೇಳಿ ಬಂದಿತ್ತು. ಹೀಗಾಗಿ ಹಲವರು ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸುತ್ತಿದ್ದಾರೆಂದು ಹೇಳಿದ್ದಾರೆ.
ಕಾನೂನಿನ ಅಡಿಯಲ್ಲಿ ಕೆಲ ನಿಬಂಧನೆಗಳಿದ್ದು, ವಿಧ್ವಂಸಕ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ನಿಷೇಧಿಸಲು ಅವಕಾಶವಿದೆ. ಈ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ. ಪ್ರಸ್ತುತ ಹಿಂಸಾಚಾರದಲ್ಲಿ ಪಾಲ್ಗೊಂಡಿರುವವರಲ್ಲಿ ಎಸ್ಡಿಪಿಐ, ಪಿಎಫ್ಐ ಬೆಂಬಲಿಗರು, ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದಾರೆಂದು ತಿಳಿಸಿದ್ದಾರೆ.