ಅಗ್ನಿಪಥ್ ಯೋಜನೆ: ಕೋಟಿ ವಿಮೆ, ಕ್ಯಾಂಟೀನ್, 30 ದಿನ ರಜೆ ಸೌಲಭ್ಯ- ವಿವರ ಬಿಡುಗಡೆ
ನವದೆಹಲಿ: ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗಾಗಿ ವಾಯುಪಡೆ ತನ್ನ ವೆಬ್ ಸೈಟ್ ನಲ್ಲಿ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವಿವರದ ಪ್ರಕಾರ 4 ವರ್ಷಗಳ ಸೇವಾವಧಿಯಲ್ಲಿ ಖಾಯಂ ಯೋಧರಿಗೆ ಸಿಗುವ ಸೌಲಭ್ಯಗಳಿಗನುಗುಣವಾಗಿ ಹಲವು ಸೌಲಭ್ಯಗಳನ್ನು ಅಗ್ನಿವೀರರಿಗೂ ವಾಯುಪಡೆ ಒದಗಿಸಲಿದೆ.
ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾದ ಮಾಹಿತಿ ಪ್ರಕಾರ, ಸಂಬಳದ ಜೊತೆಗೆ ಅಗ್ನಿವೀರರಿಗೆ ಸಮವಸ್ತ್ರ ಭತ್ಯೆ, ಕ್ಯಾಂಟೀನ್ ಸೌಲಭ್ಯ ಮತ್ತು ವೈದ್ಯಕೀಯ ಸೌಲಭ್ಯವೂ ಸಿಗಲಿದೆ. ಈ ಸೌಲಭ್ಯಗಳು ಸಾಮಾನ್ಯ ಸೈನಿಕರಿಗೂ ದೊರೆಯುತ್ತಿವೆ.
ಸೇವಾವಧಿಯಲ್ಲಿ ಅಗ್ನಿ ವೀರರು ಪ್ರಯಾಣ ಭತ್ಯೆ ಪಡೆಯಲಿದ್ದಾರೆ. ಇದಲ್ಲದೇ ವರ್ಷದಲ್ಲಿ 30 ದಿನ ರಜೆ ಸಿಗಲಿದೆ. ಅವರಿಗೆ ವೈದ್ಯಕೀಯ ರಜೆ ವ್ಯವಸ್ಥೆ ಪ್ರತ್ಯೇಕ. ಅಗ್ನಿವೀರರಿಗೆ ಸಿಎಸ್ ಡಿ ಕ್ಯಾಂಟೀನ್ ಸೌಲಭ್ಯವೂ ಸಿಗಲಿದೆ. ದುರಾದೃಷ್ಟವಶಾತ್ ಒಬ್ಬ ಅಗ್ನಿವೀರನು ಸೇವಾವಧಿಯಲ್ಲಿ (ನಾಲ್ಕು ವರ್ಷಗಳು) ಮರಣ ಹೊಂದಿದರೆ ಅವನ ಕುಟುಂಬವು ವಿಮಾ ರಕ್ಷಣೆಯನ್ನು ಪಡೆಯುತ್ತದೆ. ಇದರಡಿ ಅವರ ಕುಟುಂಬಕ್ಕೆ ಸುಮಾರು 1 ಕೋಟಿ ರೂ. ವಿಮೆ ದೊರೆಯಲಿದೆ.
ಅಗ್ನಿವೀರರು 4 ವರ್ಷಗಳ ಸೇವಾ ಅವಧಿಯಲ್ಲಿ 48 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಇದಲ್ಲದೇ ಅಗ್ನಿವೀರನ ನಿವೃತ್ತಿ ನಿಧಿಗೆ ಠೇವಣಿ ಇಟ್ಟಿರುವ ಮೊತ್ತದ ಮೇಲಿನ ಸರ್ಕಾರದ ಕೊಡುಗೆ ಮತ್ತು ಬಡ್ಡಿಯನ್ನು ಅಗ್ನಿವೀರ್ ಕುಟುಂಬಕ್ಕೆ ನೀಡಲಾಗುತ್ತದೆ.
ಅಗ್ನೀವೀರರು ಕರ್ತವ್ಯದ ಸಾಲಿನಲ್ಲಿ ಅಂಗವಿಕಲರಾದರೆ 44 ಲಕ್ಷ ರೂ. ಇದರೊಂದಿಗೆ ಕೆಲಸದ ಪೂರ್ಣ ವೇತನ ದೊರೆಯಲಿದೆ. ಸೇವಾ ನಿಧಿಯ ಪ್ಯಾಕೇಜ್ ಕೂಡಾ ದೊರೆಯಲಿದೆ. ಸೇವೆಯನ್ನು ಪೂರ್ಣಗೊಳಿಸಿದ ನಂತರ ಅಗ್ನಿವೀರರಿಗೆ ವಿವರವಾದ ಕೌಶಲ್ಯ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರ ಅಗ್ನಿವೀರರ ಕೌಶಲ್ಯ ಮತ್ತು ಅರ್ಹತೆಗಳನ್ನು ವಿವರಿಸಲಿದೆ.