ಅಡಕೆ ಬೆಳೆಗೆ ನಿಗದಿ ಪಡಿಸಿದ ಉತ್ಪಾದನಾ ಅಂದಾಜು ವೆಚ್ಚ ಹೆಚ್ಚಳಕ್ಕೆ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ದೆಹಲಿಗೆ ನಿಯೋಗ
ಬೆಂಗಳೂರು, ಜೂ.18: ಅಡಕೆ ಧಾರಣೆ ಬಗ್ಗೆ ರೈತರಲ್ಲಿ ಯಾವುದೇ ಆತಂಕ ಪಡುವುದು ಬೇಡ ಎಂದಿರುವ ಗೃಹ ಸಚಿವರೂ ಹಾಗೂ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಕೇಂದ್ರ ಸರಕಾರವು ನಿಗದಿಪಡಿಸಿದ ಅಡಕೆ ಬೆಲೆಯ ಅಂದಾಜು ವೆಚ್ಚವನ್ನು ಪರಿಷ್ಕರಿಸಿ ಹೆಚ್ಚಳ ಮಾಡುವಂತೆ, ಒತ್ತಾಯಿಸಲು ಕೇಂದ್ರಕ್ಕೆ ನಿಯೋಗವನ್ನು ತೆಗೆದುಕೊಂಡು ಹೋಗಲಾಗುತ್ತದೆ, ಎಂದಿದ್ದಾರೆ.
ರಾಜ್ಯದ ಮಲೆನಾಡು ಭಾಗದ ಲಕ್ಷಾಂತರ ರೈತ ಹಾಗೂ ರೈತ_ಕಾರ್ಮಿಕ ಕುಟುಂಬಗಳ ಆರ್ಥಿಕ ಬೆನ್ನೆಲುಬಾಗಿರುವ ಅಡಕೆ ಬೆಳೆಗೆ ಸುಸ್ಥಿರ ಬೆಲೆ ಯನ್ನೊದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ಈ ಕುರಿತು ರೈತ ಸಮುದಾಯ ಯಾವುದೇ ಆತಂಕ ಪಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಹಣದುಬ್ಬರ ಹಾಗೂ ಇನ್ನಿತರ ಕಾರಣಗಳಿಂದಾಗಿ ಅಡಕೆ ಬೆಳೆ ಉತ್ಪಾದನಾ ವೆಚ್ಚವೂ ಹೆಚ್ಚಿದ್ದು ಪ್ರಸ್ತುತ ಪ್ರತಿ ಕಿಲೋ ಅಡಕೆ ಅಂದಾಜು ವೆಚ್ಚ ರೂಪಾಯಿ 25 ರಸ್ಟಿದ್ದು, ಸುಮಾರು ಆರು ವರ್ಷಗಳ ಹಿಂದೆ ನಿಗದಿ ಪಡಿಸಲಾಗಿದೆ ಹಾಗೂ ಪುನಃ ಪರಿಷ್ಕರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದಿದ್ದಾರೆ.
ಈ ಹಿಂದೆ ಕೇಂದ್ರ ಸರಕಾರ ದೇಶಿಯ ಅಡಿಕೆ ಉತ್ಪನ್ನ ಅಂದಾಜು ವೆಚ್ಚವನ್ನು ಹೆಚ್ಚಳ ಮಾಡಿದಾಗ, ವಿದೇಶದಿಂದ ಅಮದಾಗುತ್ತಿದ್ದ ಕಡಿಮೆ ಗುಣಮಟ್ಟದ ಅಡಿಕೆ ಪ್ರಮಾಣ ಗಣನೀಯವಾಗಿ ತಗ್ಗಿದ್ದನ್ನು ಸ್ಮರಿಸಿದ್ದಾರೆ. ವಿದೇಶದಿಂದ ಆಮದಾಗುವ ಅಡಿಕೆ, ಗುಣಮಟ್ಟದಲ್ಲಿ ಅತ್ಯಂತ ನಿಕೃಷ್ಟ ವಾಗಿದ್ದು ದೇಶಿಯ ಅಡಿಕೆ, ಗುಣಮಟ್ಟದಲ್ಲಿ ಆತ್ಯುಕೃಷ್ಟ ವಾಗಿದೆ ಎಂದು, ಪ್ರಮಾಣೀಕೃತ ವಾಗಿದೆ ಎಂದೂ ತಿಳಿಸಿದ್ದಾರೆ. ಕೇಂದ್ರ ಕೃಷಿ ಸಚಿವರನ್ನು ರಾಜ್ಯ ಟಾಸ್ಕ್ ಫೋರ್ಸ್ ನಿಯೋಗ ಭೇಟಿಯಾಗಿ, ಅಡಿಕೆ ಉತ್ಪನ್ನ ಅಂದಾಜು ವೆಚ್ಚ ಪರಿಷ್ಕರಿಸಿ ಹೆಚ್ಚಳ ಮಾಡಲು ಮನವರಿಕೆ ಮಾಡಿ ಕೊಡಲಾಗುವುದು, ರೈತರು ಅಡಿಕೆ ಧಾರಣೆ ಬಗ್ಗೆ ಯಾವುದೇ ಆತಂಕ ಹಾಗೂ ಭಯಪಡುವುದು ಬೇಡ ಎಂದೂ ಸಚಿವರು ವಿನಂತಿಸಿದ್ದಾರೆ.