ಅಗ್ನಿಪಥ ಯೋಜನೆ: ರ್‍ಯಾಂಕ್ ಇಲ್ಲ, ಪಿಂಚಣಿ ಇಲ್ಲ, ಯುವಕರ ಅಗ್ನಿಪರೀಕ್ಷೆ ಬೇಡ: ರಾಹುಲ್
ನವದೆಹಲಿ, ಜೂ16: ನಿರುದ್ಯೋಗಿಗಳನ್ನು ಅಗ್ನಿಪಥದಲ್ಲಿ ನಡೆಸಿ ಅವರ ತಾಳ್ಮೆಯ ಅಗ್ನಿಪರೀಕ್ಷೆ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.
ಕೇಂದ್ರದ ಅಗ್ನಿಪಥ ಯೋಜನೆ ಕುರಿತು ಟ್ವೀಟ್ ಮಾಡಿರುವ ಅವರು, ಗುತ್ತಿಗೆ ಆಧಾರದ ಮೇಲೆ ಅಲ್ಪಾವಧಿಗೆ ಸೇನಾ ನೇಮಕಾತಿ ಮಾಡುವುದು ಸರಿಯಾದ ಕ್ರಮವಲ್ಲ. ನೇರ ನೇಮಕಾತಿಯಾಗಲೀ, ಪಿಂಚಣಿಯಾಗಲೀ ಈ ಯೋಜನೆಯಡಿ ಇಲ್ಲ. ರ್ಯಾಂಕ್ ಇಲ್ಲ, ಪಿಂಚಣಿ ಇಲ್ಲ, 2 ವರ್ಷಗಳ ಕಾಲ ನೇರ ನೇಮಕಾತಿ ಇಲ್ಲ, ನಾಲ್ಕು ವರ್ಷಗಳ ನಂತರ ಸ್ಥಿರ ಭವಿಷ್ಯವಿಲ್ಲ, ಸೇನೆಗೆ ಸರ್ಕಾರವು ಗೌರವವನ್ನು ತೋರಿಸುವುದಿಲ್ಲ.
ನಾಲ್ಕು ವರ್ಷಗಳಿಗೆ ನೇಮಕಾತಿ ಮಾಡಿ ಬಳಿಕ ನಿವೃತ್ತಿಗೊಳಿಸಿದರೆ ಅವರ ಭವಿಷ್ಯದ ಕತೆಯೇನು? ಎಂದವರು ಇದೇ ವೇಳೆ ಪ್ರಶ್ನಿಸಿದ್ದಾರೆ. ದೇಶದ ನಿರುದ್ಯೋಗಿ ಯುವಕರ ಧ್ವನಿಯನ್ನು ಆಲಿಸುವ, ಅವರನ್ನು ‘ಅಗ್ನಿಪಥ’ದಲ್ಲಿ ನಡೆಯುವಂತೆ ಮಾಡುವ ಮೂಲಕ ಅವರ ತಾಳ್ಮೆಯ ‘ಅಗ್ನಿಪರೀಕ್ಷೆ’ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.