ಹಿಂಸಾಚಾರದ ವೇಳೆ ಗಲಭೆ ಕೋರರಿಂದ ಆಂಜನೇಯ ದೇಗುಲ ರಕ್ಷಿಸಿದ ಮುಸ್ಲಿಂ ಯುವಕರು!
ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಭೆ ಕೋರರಿಂದ ಆಂಜನೇಯಸ್ವಾಮಿ ದೇಗುಲವನ್ನು ರಕ್ಷಿಸಲು ಸ್ಳಳೀಯ ಮುಸ್ಲಿಂ ಯುವಕರು ಮಾನವ ಸರಪಳಿ ನಿರ್ಮಿಸಿ ಕರ್ತವ್ಯ ಪಾಲನೆ ಮಾಡಿದ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರದ ನಡುವೆಯೂ ಡಿಜೆ ಹಳ್ಳಿ ಸ್ಥಳೀಯ ಮುಸ್ಲಿಂ ಯುವಕರು ಧರ್ಮವನ್ನು ಪಕ್ಕಕ್ಕಿಟ್ಟು, ಮಾನವ ಸರಪಳಿ ನಿರ್ಮಿಸಿ ದೇಗುಲದ ಮೇಲಾಗ ಬಹುದಾಗಿದ್ದ ಸಂಭಾವ್ಯ ದಾಳಿಯನ್ನು ತಡೆದು ಕೋಮು ಸೌಹಾರ್ಧತೆ ಮೆರೆದಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಉದ್ರಿಕ್ತರ ಗುಂಪೊಂದು ದಾಳಿ ನಡೆಸಿ ಕಲ್ಲು ತೂರಾಟ ಮಾಡಿದ್ದಲ್ಲದೇ ಮನೆಗೆ ಬೆಂಕಿ ಹಚ್ಚಿದ್ದರು. ಅದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಿ ಪುಂಡರು ದಾಂಧಲೆ ನಡೆಸಿದ್ದರು. ಇದರ ನಡುವೆ ಶಾಸಕರ ಮನೆಯ ಎದುರು ಭಾಗದಲ್ಲೇ ಆಂಜನೇಯಸ್ವಾಮಿ ದೇಗುಲವಿದ್ದು, ಈ ದೇಗುಲದ ಮೇಲೆ ದಾಳಿಯಾಗಬಹುದು ಎಂಬ ಶಂಕೆ ಮೇರೆಗೆ ಸ್ಥಳೀಯ ಯುವಕರು ಮಾನವ ಸರಪಳಿ ನಿರ್ಮಿಸಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸ್ಥಳೀಯ ಯುವಕರ ಕಾರ್ಯ ಮತ್ತು ಸಮಯ ಪ್ರಜ್ಞೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.