ಸೂರ್ಯ ಹುಟ್ಟಿ ಮುಳುಗುವುದು ಎಷ್ಟು ಸತ್ಯವೋ ನಿಮ್ಮ ಪಕ್ಷ ಅಧಿಕಾರದಿಂದ ಕೆಳಗಿಳಿಯುವುದು ಅಷ್ಟೇ ಸತ್ಯ- ಸಿದ್ದರಾಮಯ್ಯ
ಬೆಂಗಳೂರು, ಜೂ.15 : ಶಿಕ್ಷಣ ಸಚಿವರ ಮನೆ ಮುಂದೆ ಚಡ್ಡಿ ಸುಟ್ಟ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ಹಾಕುವವರು ತಲೆ ಮೇಲೆ ಹಳೇ ಚಡ್ಡಿ ಹೊತ್ತು ಬಂದಾಗ ಬಿಜೆಪಿ ನಾಯಕನ ಮೇಲೆ ಏಕೆ ಪ್ರರಕಣ ದಾಖಲಿಸಿಲ್ಲ’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದ ಕ್ವಿನ್ಸ್ ರಸ್ತೆಯ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಮ್ಮ ಹುಡುಗರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆ ಮುಂದೆ ಒಂದು ಚಡ್ಡಿ ಸುಟ್ಟಿದ್ದಕ್ಕೆ ಪ್ರಕರಣ ದಾಖಲಿಸಿದರು. ಆದರೆ, ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹಳೇ ಚಡ್ಡಿ ಹೊತ್ತು ಬಂದಾಗ ಅವನ ಮೇಲೆ ಏಕೆ ಪ್ರರಕಣ ದಾಖಲಿಸಿಲ್ಲ’ ಎಂದು ಪ್ರಶ್ನೆ ಮಾಡಿದ್ದಾರೆ.
ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ ಅವರು, ನೀವು ಎಷ್ಟೇ ಸುಳ್ಳು ಕೇಸ್ ದಾಖಲಿಸಬಹುದು, ಆದರೆ ಸತ್ಯಾಂಶ ಹೊರಗೆ ಬಂದೇ ಬರಲಿದೆ. ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಣ್ಣ ಅಧಿಕಾರವಿಲ್ಲದೇ ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಅಂತಹವರಿಗೆ ನೀವು ಕಿರುಕುಳ ನೀಡಲು ಹೊರಟಿದ್ದು, ಇದನ್ನು ದೇಶದ ಜನ ಸಹಿಸುವುದಿಲ್ಲ. ಸೂರ್ಯ ಹುಟ್ಟಿ ಮುಳುಗುವುದು ಎಷ್ಟು ಸತ್ಯವೋ ನಿಮ್ಮ ಪಕ್ಷ ಅಧಿಕಾರದಿಂದ ಕೆಳಗಿಳಿಯುವುದು ಅಷ್ಟೇ ಸತ್ಯ ಎಂದು ಹೇಳಿದರು.
ನಮ್ಮ ನಾಯಕರಾದ ಡಿ.ಕೆ ಸುರೇಶ್, ದಿನೇಶ್ ಗುಂಡೂರಾವ್, ಶ್ರೀನಿವಾಸ್, ಎಚ್.ಕೆ ಪಾಟೀಲ್, ಚಿದಂಬರಂ, ವೇಣುಗೋಪಾಲ್ ಅವರನ್ನು ಹೊಸದಿಲ್ಲಿಯಲ್ಲಿ ದನಗಳನ್ನು ಎಳೆದುಕೊಂಡು ಹೋಗುವಂತೆ ಎಳೆದುಕೊಂಡು ಹೋಗುತ್ತಿದ್ದೀರಿ. ಇದು ಬಿಜೆಪಿಯ ದುರಾಡಳಿತ. ನಿಮಗೆ ತಾಕತ್ತಿದ್ದರೆ ಕಾನೂನುಬದ್ಧ ಹೋರಾಟ ಮಾಡಿ, ಅದನ್ನು ಎದುರಿಸಲು ನಾವು ಸಿದ್ಧವಿದ್ದೇವೆ ಎಂದು ಸವಾಲು ಹಾಕಿದರು. ಹಾಗೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮೇಲೆ ದಾಳಿ ಆದಾಗ ಕಾಂಗ್ರೆಸ್ ಏಕೆ ಪ್ರತಿಭಟನೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗಾಂಧಿ ಅವರಂತೆ ಖರ್ಗೆ ಅವರನ್ನು ಮೂರು ದಿನ ಕರೆದು ಇಟ್ಟುಕೊಂಡಿದ್ದರಾ? ಕೇವಲ ಖರ್ಗೆ ಅವರು ಮಾತ್ರವಲ್ಲ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತನ ಮೇಲೆ ಇಂತಹ ದೌರ್ಜನ್ಯ ನಡೆದರೆ ಪಕ್ಷ ಸುಮ್ಮನೆ ಕೂರುವುದಿಲ್ಲ ಎಂದರು.
ನಗರದಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂಬ ಹೈಕೋರ್ಟ್ ನಿರ್ದೇಶನದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಬಿಜೆಪಿಯವರು ನಿಯಮ ಉಲ್ಲಂಘನೆ ಮಾಡಿಲ್ಲವೇ. ಜನರ ಹಣ ಲೂಟಿ ಮಾಡಿಲ್ಲವೇ. ಸಂವಿಧಾನ ನೀಡಿರುವ ಹಕ್ಕು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.