| ಬೆಂಗಳೂರು ಜೂ.13: ಶಿಕ್ಷಣದಿಂದ ವಂಚಿತ ಪಾಲಿಕೆಯ 198 ವಾರ್ಡ್ಗಳ ಮಕ್ಕಳಿಗೆ ರಾತ್ರಿ ಶಾಲೆ ಆರಂಭಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಕೂಲಿ ಕಾರ್ಮಿಕರ ಮಕ್ಕಳು, ಬಡ ಕುಟುಂಬದ ಮಕ್ಕಳು ಶಾಲೆಗೆ ಬಾರದೆ ದಿನಗೂಲಿಗೆ ಹೋಗ್ತಿದ್ದಾರೆ. ಇಂತಹವರಿಗಾಗಿ ಬಿಬಿಎಂಪಿ ವಿಶೇಷ ಆಯುಕ್ತ ರಾಮ್ ಪ್ರಸಾದ್ ಮನೋಹರ್ ಹೊಸ ಶಿಕ್ಷಣ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ರಾತ್ರಿ ಶಾಲೆ ಆರಂಭಿಸಲು ವಿನೂತನ ಯೋಜನೆಯ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಮುಂದಿಡಲಿದ್ದಾರೆ. ಎಲ್ಲವೂ ನಿಗದಿಯಂತೆ ನಡೆದರೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಿ ವಾರ್ಡ್ನ ಸರ್ಕಾರಿ, ಬಿಬಿಎಂಪಿ ಶಾಲೆಗಳಲ್ಲಿ ಕಲಿಕೆ, ಸಂಜೆ 6 ರಿಂದ 9 ಗಂಟೆವರೆಗೆ ಶಾಲೆ ವೇಳಾಪಟ್ಟಿ, ಉಚಿತ ಪಠ್ಯಪುಸ್ತಕ, ಲೇಖನಿ ಸಾಮಗ್ರಿಗಳು, ಸಮವಸ್ತ್ರ ವಿತರಣೆ, ನುರಿತ ಶಿಕ್ಷಕವೃಂದದಿಂದ ಬೋಧನೆ ನೀಡಲಾಗುತ್ತದೆ. ಹಾಗೂ ರಾತ್ರಿ ಶಾಲೆಗೆ ಬರುವ ಮಕ್ಕಳಿಗೆ ಉಚಿತ ಇಸ್ಕಾನ್ ಊಟ, ಮಕ್ಕಳಿಗೆ ರಾತ್ರಿ ವೇಳೆ ಮನೆಗೆ ತೆರಳಲು ಉಚಿತ ಬಸ್ ವ್ಯವಸ್ಥೆ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸೋದು ಮತ್ತು ವರ್ಷಕ್ಕೆ ಒಂದು ಬಾರಿ ಉಚಿತ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಯೋಜನೆ ಇದೆ ಎಂದು ತಿಳಿದು ಬಂದಿದೆ.
ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು ಎಂದು ಸರ್ಕಾರದ ಕಾನೂನು ಇದ್ದರೂ ಪೋಷಕರು ಕಳುಹಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ರಾತ್ರಿ ಶಾಲೆ ನಡೆಸುವ ಯೋಜನೆಯನ್ನು ಮುಂದಿಟ್ಟಿದೆ. ಈ ಹಿಂದೆ ಬಳ್ಳಾರಿ ಡಿಸಿಯಾಗಿ ಕಾರ್ಯ ನಿರ್ವಹಿಸಿದ ಮನೋಹರ್ ಅವರು ಬಳ್ಳಾರಿಯಲ್ಲಿ ರಾತ್ರಿ ಶಾಲೆ ಯೋಜನೆ ಜಾರಿಗೆ ತಂದು ಯಶಸ್ಸು ಕಂಡಿದ್ರು. ಪ್ರಸ್ತುತ ಬೆಂಗಳೂರಿನಲ್ಲೂ ಇದೇ ರೀತಿ ಯೋಜನೆ ರೂಪಿಸುತ್ತಿದ್ದಾರೆ.
| |