ಜಗತ್ತಿನ ಮೊಟ್ಟ ಮೊದಲ ಕೊರೋನಾ ಲಸಿಕೆ ರಷ್ಯಾದಿಂದ ನೋಂದಣಿ: ಪುಟಿನ್ ಪುತ್ರಿಗೂ ಲಸಿಕೆ ನೀಡಿದ ವೈದ್ಯರು!
ಮಾಸ್ಕೋ: ಜಗತ್ತಿನ ಮೊಟ್ಟ ಮೊದಲ ಕೊರೋನಾ ಲಸಿಕೆ ರಷ್ಯಾದಿಂದ ನೋಂದಣಿಯಾಗಿದ್ದು, ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ.
ಈ ಬಗ್ಗೆ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾಹಿತಿ ನೀಡಿದ್ದು, ರಷ್ಯಾದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೋವಿಡ್19 ಲಸಿಕೆ ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾದ ಆರೋಗ್ಯ ಸಚಿವಾಲಯ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು, ಆ ಮೂಲಕ ಜಗತ್ತಿನ ಮೊದಲ ಕೋವಿಡ್- 19 ಲಸಿಕೆ ಮಂಗಳವಾರ ಅಧಿಕೃತವಾಗಿ ನೋಂದಣಿಯಾಗಿದೆ ಎಂದು ಹೇಳಿದ್ದಾರೆ.
‘ದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕೊರೊನಾ ವೈರಸ್ ಲಸಿಕೆಯನ್ನು ಬಳಕೆಗೆ ನೋಂದಾಯಿಸಲಾಗಿದೆ ಹಾಗೂ ಒಬ್ಬಳು ಮಗಳಿಗೆ ಆಗಲೇ ಲಸಿಕೆ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಮೂಲಗಳ ಪ್ರಕಾರ ಮಾಸ್ಕೊದ ಗಮೆಲಿಯಾ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯದ ಜಂಟಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿದೆ. ಈ ಲಸಿಕೆಯನ್ನು ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮನುಷ್ಯರ ಮೇಲೆ ಪ್ರಯೋಗ ನಡೆಸಲಾಗಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿ ಭಾಗಿಯಾದ ಎಲ್ಲ 38 ಜನರಲ್ಲಿಯೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದನ್ನು ಗಮನಿಸಿರುವುದಾಗಿ ರಷ್ಯಾ ರಕ್ಷಣಾ ಸಚಿವಲಯ ಹೇಳಿದೆ. ಜೂನ್ 18ರಿಂದ ಕ್ಲಿನಿಕಲ್ ಟ್ರಯಲ್ಗಳನ್ನು (ಮನುಷ್ಯರ ಮೇಲೆ) ಆರಂಭಿಸಲಾಗಿತ್ತು. ಪ್ರಯೋಗಕ್ಕೆ ಒಳಗಾದವರ ಪೈಕಿ ಮೊದಲ ಗುಂಪು ಜುಲೈ 15ರಂದು ಸಂಶೋಧನಾ ಕೇಂದ್ರಗಳಿಂದ ಬಿಡುಗಡೆಯಾಗಿದ್ದು, ಎರಡನೇ ಗುಂಪು ಜುಲೈ 20ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಹೇಳಲಾಗಿದೆ.
ಅಂತೆಯೇ ಮುಂದಿನ ದಿನಗಳಲ್ಲಿ ಈ ಲಸಿಕೆಯ ತಯಾರಿಕಾ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿ ಕೆಲವೇ ವಾರಗಳಲ್ಲಿ ಮಿಲಿಯನ್ ಗಟ್ಟಲೇ ಡೋಸ್ ಲಸಿಕೆಗಳನ್ನು ತಯಾರಿಸಲಾಗುತ್ತದೆ ಎಂದು ರಷ್ಯಾ ಹೇಳಿದೆ.
ಕಳೆದ ವಾರ ಲಸಿಕೆ ತಯಾರಿಕಾ ರೇಸ್ ಕುರಿತಂತೆ ರಷ್ಯಾಗೆ ಕಿವಿಮಾತು ಹೇಳಿದ್ದ ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಹೇಳಿತ್ತು.