ಶುಕ್ರವಾರದ ನಂತರ ಶನಿವಾರ ಬಂದೇ ಬರುತ್ತೆ-ಪ್ರತಿಭಟನಾಕಾರರಿಗೆ ಯೋಗಿ ಸರ್ಕಾರ ‘ಬುಲ್ಡೋಜರ್ ಕ್ರಮ’ದ ಎಚ್ಚರಿಕೆ
ಲಖನೌ: ಪ್ರವಾದಿ ಕುರಿತ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ್ ಸರ್ಕಾರ ಪ್ರತಿಭಟನಾಕಾರರಿಗೆ ‘ಬುಲ್ಡೋಜರ್ ಕ್ರಮ’ದ ಎಚ್ಚರಿಕೆ ನೀಡಿದೆ.
ಪ್ರವಾದಿ ಕುರಿತ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಘರ್ಷಣೆಯಲ್ಲಿ ತೊಡಗಿರುವ ದುಷ್ಕರ್ಮಿಗಳ ಮನೆಗಳನ್ನು ಕೆಡವಲು ಶನಿವಾರ ಕಾನ್ಪುರದ ಬೀದಿಗಳಲ್ಲಿ ಬುಲ್ಡೋಜರ್‌ಗಳು ಬರಲಿವೆ ಎಂದು ಯೋಗಿ ಆದಿತ್ಯಾನಾಥ್ ಸರ್ಕಾರ ಎಚ್ಚರಿಕೆ ನೀಡಿದೆ. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಇಸ್ಲಾಮಿಕ್ ಸಂಘಟನೆ ಯೊಂದು ಪರೇಡ್ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಮುಚ್ಚಲು ಜೂನ್ 3 ರಂದು ಕರೆ ನೀಡಿದ ನಂತರ ಕಾನ್ಪುರದಲ್ಲಿ ಹಿಂಸಾತ್ಮಕ ಘರ್ಷಣೆಗಳು ಮತ್ತು ಕಲ್ಲು ತೂರಾಟಗಳು ನಡೆದವು.
ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಶುಕ್ರವಾರ ಈ ವಿಷಯದ ಬಗ್ಗೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಏತನ್ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಅವರು ಶನಿವಾರ ಪ್ರತಿಭಟನಾಕಾರರಿಗೆ ಬುಲ್ಡೋಜರ್ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನೆನಪಿಡಿ, ಪ್ರತಿ ಶುಕ್ರವಾರದ ನಂತರ ಶನಿವಾರ ಬರುತ್ತದೆ’ ಎಂದು ಬುಲ್ಡೋಜರ್‌ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಏತನ್ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಶುಕ್ರವಾರ ರಾಜ್ಯದ ವಿವಿಧ ನಗರಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ‘ಸಮಾಜ ವಿರೋಧಿ’ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಪ್ರಯಾಗ್‌ರಾಜ್, ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ರಾಂಪುರ ಮತ್ತು ಲಕ್ನೋದಲ್ಲಿ ಶುಕ್ರವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಆರು ಜಿಲ್ಲೆಗಳಿಂದ 230 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.