ಮುಸ್ಲಿಂ ಸಿಬ್ಬಂದಿ ಟೋಪಿ ಧರಿಸುವುದನ್ನು ವಿರೋಧಿಸಿ ಬಸ್ ಸಿಬ್ಬಂದಿಯಿಂದ ಕೇಸರಿ ಶಾಲು ಧರಿಸಿ ಪ್ರತಿಭಟನೆ
ಬೆಂಗಳೂರು: ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಂತರ ಈಗ ಟೋಪಿ ವಿವಾದ ಆರಂಭವಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ(ಬಿಎಂಟಿಸಿ) ಮುಸ್ಲಿಂ ಸಿಬ್ಬಂದಿ ಟೋಪಿ ಧರಿಸುವುದನ್ನು ವಿರೋಧಿಸಿ ಬಿಎಂಟಿಸಿಯ ಕೆಲವು ಹಿಂದೂ ಸಿಬ್ಬಂದಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಬಿಎಂಟಿಸಿಯ ಕೆಲವು ಹಿಂದೂ ನೌಕರರು, ಮುಸ್ಲಿಂ ಚಾಲಕರು, ಕಂಡಕ್ಟರ್‌ಗಳು ಮತ್ತು ಇತರರು ಸ್ಕಲ್ ಕ್ಯಾಪ್(ಟೋಪಿ) ಧರಿಸಿರುವುದನ್ನು ವಿರೋಧಿಸಿ ಈಗ ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ಮುನ್ನವೇ ಟೋಪಿ ವಿವಾದ ಸೃಷ್ಟಿಯಾಗಿದ್ದು, ಹಿಂದೂ ನೌಕರರು ತಮ್ಮ ಮುಸ್ಲಿಂ ಸಹೋದ್ಯೋಗಿಗಳು ಸ್ಕಲ್ ಕ್ಯಾಪ್ ಧರಿಸುವುದನ್ನು ವಿರೋಧಿಸಿದ್ದಾರೆ. ಇದು ಬಿಎಂಟಿಸಿ ನಿಗದಿ ಪಡಿಸಿದ ಸಮವಸ್ತ್ರದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. ಆದಾಗ್ಯೂ, ಕೆಲಸದ ಸಮಯದಲ್ಲಿ ತಲೆಗೆ ಧರಿಸಿರುವ ಟೋಪಿಯನ್ನು ತೆಗೆದುಹಾಕಲು ಮುಸ್ಲಿಂ ಉದ್ಯೋಗಿಗಳು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಇದು ಹಿಂದೂ ನೌಕರರು ಪ್ರತೀಕಾರವಾಗಿ ಕೇಸರಿ ಶಾಲು ಧರಿಸಲು ಪ್ರೇರೇಪಿಸಿದೆ.
ಬಿಎಂಟಿಸಿಯಲ್ಲಿ ಕಟ್ಟುನಿಟ್ಟಾದ ಏಕರೂಪದ ನಿಯಮಗಳನ್ನು ಜಾರಿಗೆ ತರಲು ಮತ್ತು ಟೋಪಿ ಧರಿಸುವುದನ್ನು ತಪ್ಪಿಸುವ ಉದ್ದೇಶದಿಂದ ಹಿಂದೂ ಸಿಬ್ಬಂದಿಗಳು “ಕೇಸರಿ ಕಾರ್ಮಿಕರ ಸಂಘ” ಎಂಬ ಹೆಸರಿನಲ್ಲಿ ಸಂಘವನ್ನು ಕಟ್ಟಿಕೊಂಡಿದ್ದಾರೆ. ಈ ಸಂಘದ ಅಡಿಯಲ್ಲಿ ಸುಮಾರು 1,500 ನೌಕರರು ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರು ಕರ್ತವ್ಯದ ಸಮಯದಲ್ಲಿ ಮುಸ್ಲಿಂ ಸಿಬ್ಬಂದಿ ಟೋಪಿ ಧರಿಸುವುದನ್ನು ನಿಷೇಧಿಸುವವರೆಗೆ ಕೇಸರಿ ಶಾಲು ಧರಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ಅವರು, ಮಾಧ್ಯಮಗಳಲ್ಲಿ ನೋಡಿದ ನಂತರವೇ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಮಾಧ್ಯಮಗಳು ಈ ಸುದ್ದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಡಿ ಎಂದು ವಿನಂತಿಸಿದ ಅವರು, ಬಿಎಂಟಿಸಿಯಲ್ಲಿ ಪೊಲೀಸ್ ಇಲಾಖೆಯ ರೀತಿ ಸಮಾನವಾದ ಯೂನಿಫಾರ್ಮ್ ಕೋಡ್ ಇದೆ. ಇಷ್ಟು ದಿನ ನೌಕರರು ಹೇಗೆ ಏಕರೂಪದ ನಿಯಮಗಳನ್ನು ಪಾಲಿಸುತ್ತಿದ್ದರು ಅದೇ ರೀತಿ ಶಿಸ್ತು ಪಾಲಿಸಬೇಕು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿರುವಂತೆ ಬಿ ಮ್ ಟಿ ಸಿ ಸಿಬಂದಿಗಳಿಗೂ ಸಮವಸ್ತ್ರದಲ್ಲಿ ಟೋಪಿ ಇರಲಿ. ಎರಡೂ ಗುಂಪಿನ ಸಮಸ್ಯೆ ಇತ್ಯರ್ಥವಾಗುತ್ತದೆಯಲ್ಲವೇ.