ಕಾರ್ಮಿಕರಿಗೆ ವಿತರಿಸಿದ ಟೂಲ್ ಕಿಟ್ಗಳಲ್ಲಿಯೂ ರೂ.50 ಕೋಟಿ ಅವ್ಯವಹಾರ- ಕೆಆರ್ಎಸ್ ಆರೋಪ
ಬೆಂಗಳೂರು: ‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಟೂಲ್ ಕಿಟ್ಗಳನ್ನು (ಉಪಕರಣ) ವಿತರಿಸಿದ್ದು, ಇದರಲ್ಲಿ ರೂ.50 ಕೋಟಿಯಷ್ಟು ಅವ್ಯವಹಾರ ನಡೆದಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ಆರೋಪಿಸಿದೆ.
‘ಗಾರೆ ಕೆಲಸದವರು, ಕಾರ್ಪೆಂಟರ್, ಪೇಂಟರ್ಗಳು, ಎಲೆಕ್ಟ್ರಿಷಿಯನ್, ಪ್ಲಂಬರ್ ಮತ್ತು ಕಬ್ಬಿಣ ಕಟ್ಟುವ ಕೆಲಸ ಮಾಡುವವರಿಗೆ ಅವರ ವೃತ್ತಿಗೆ ಅನುಸಾರವಾಗಿ 6 ರೀತಿಯ ಕಿಟ್ಗಳನ್ನು ಮಂಡಳಿ ವಿತರಣೆ ಮಾಡಿದೆ. ಇವೆಲ್ಲವೂ ಕಳಪೆ ಗುಣಮಟ್ಟದಿಂದ ಕೂಡಿವೆ’ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಮತ್ತು ಜಂಟಿ ಕಾರ್ಯದರ್ಶಿ ಕೆ.ಎಸ್.ಸೋಮಸುಂದರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಪರಿಕರಗಳ ಕಿಟ್ಗಳನ್ನು ಮಾಧ್ಯಮಗಳ ಎದುರು ಪ್ರದರ್ಶನ ಮಾಡಿದರು.
‘2021ರ ಅಕ್ಟೋಬರ್ 18ರಂದು ಟೆಂಡರ್ ಪ್ರಕಟಣೆ ಹೊರಡಿಸಿ 6,038 ಪೇಂಟಿಂಗ್ ಕಿಟ್ಗಳಿಗೆ ತಲಾ ರೂ 3,690ರಂತೆ ರೂ. 2.22 ಕೋಟಿ ಮೊತ್ತದಲ್ಲಿ ಖರೀದಿಗೆ ಆದೇಶಿಸಲಾಗಿದೆ. ಇವುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದರೆ ಒಂದು ಕಿಟ್ಗೆ ರೂ. 2,265 ಆಗಲಿದೆ. ಚೀನಾದಿಂದ ಬರುವ ಪರಿಕರಗಳಾದರೆ ರೂ.1,500ರಿಂದ ರೂ.1,800 ಮೊತ್ತಕ್ಕೇ ಸಿಗುತ್ತವೆ’ ಎಂದು ಅವರು ವಿವರಿಸಿದರು.
‘ಇದೇ ರೀತಿ ಬಾರ್ ಬೆಂಡಿಂಗ್ ಕಿಟ್ಗೆ ರೂ.4,748, ಕಾರ್ಪೆಂಟರ್ ಕಿಟ್ಗೆ ರೂ. 5,694, ಪ್ಲಂಬರ್ ಕಿಟ್ಗೆ ರೂ. 6,100 ದರ ನೀಡಲಾಗಿದೆ. ಇವುಗಳು ತಯಾರಾದ ವಿಳಾಸವಾಗಲೀ, ಜಿಎಸ್ಟಿ ವಿವರವಾಗಲಿ ಇಲ್ಲ. ಐಎಸ್ಐ ಮುದ್ರೆಯೂ ಇಲ್ಲ’ ಎಂದು ಆರೋಪಿಸಿದರು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಿತರಿಸಲಾದ ಎರಡು ಟೂಲ್ಕಿಟ್ಗಳ ದಾಖಲೆಗಳನ್ನು ನಾವು ಪಡೆದಿದ್ದೇವೆ. ಇವುಗಳ ಮೊತ್ತವೇ ರೂ. 8 ಕೋಟಿಯಿಂದ ರೂ. 10 ಕೋಟಿ ಇದೆ. ಇನ್ನುಳಿದ ಆರು ವಿಭಾಗಗಳಿಗೆ ಕಿಟ್ ವಿತರಿಸಲಾಗಿದ್ದು, ಒಟ್ಟಾರೆ ರೂ. 50 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ’ ಎಂದರು.
ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಕ್ರಮ, ಭ್ರಷ್ಟಾಚಾರ ನಡೆಯುತ್ತಿದ್ದರೂ ಗಮನ ಹರಿಸದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರೂ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.