ನೀಟ್- ಪಿಜಿ ವಿಶೇಷ ಕೌನ್ಸೆಲಿಂಗ್ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ನೀಟ್-ಪಿಜಿ 2021 ರಲ್ಲಿ ಅರ್ಹತೆ ಪಡೆದವರಿಗಾಗಿ ನಡೆದ ಅಖಿಲ ಭಾರತ ಕೋಟಾದ ಕೌನ್ಸೆಲಿಂಗ್ ನಂತರವೂ ಉಳಿದ 1,456 ಸೀಟುಗಳನ್ನು ಭರ್ತಿ ಮಾಡಲು ಮತ್ತೊಂದು ಸುತ್ತಿನ ವಿಶೇಷ ಕೌನ್ಸಲಿಂಗ್ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನೀಟ್- ಪಿಜಿ ವಿಶೇಷ ಕೌನ್ಸೆಲಿಂಗ್ ಅವಕಾಶ ನೀಡದಿರುವ ಕೇಂದ್ರ ಸರ್ಕಾರ ಮತ್ತು ವೈದ್ಯಕೀಯ ಮಂಡಳಿಯ ನಿರ್ಧಾರವು ಸಾರ್ವಜನಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಹಿತಾಸಕ್ತಿಯಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ರಜಾಕಾಲದ ಪೀಠ ಹೇಳಿದೆ.

ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯಿಂದ ಸರ್ಕಾರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ(ಎಂಸಿಸಿ) ವಿಶೇಷ ಕೌನ್ಸೆಲಿಂಗ್ ಗೆ ಅವಕಾಶ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನಿನ್ನೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್, ಆದೇಶವನ್ನು ಕಾಯ್ದಿರಿಸಿತ್ತು. ಕೇಂದ್ರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಬಲ್ಬೀರ್ ಸಿಂಗ್ ಅವರು, ಈಗಾಗಲೇ ಫೆಬ್ರುವರಿಯಲ್ಲಿ ತರಗತಿಗಳು ಪ್ರಾರಂಭವಾಗಿವೆ. ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಿದರೆ ನೀಟ್‌ 2022ರಲ್ಲಿ ಪ್ರವೇಶ ಪಡೆಯುವವರಿಗೆ ನಡೆಯುವ ಬೋಧನಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!