ನಾಲ್ಕು ಕೈ, ನಾಲ್ಕು ಕಾಲು ಇದ್ದ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾಗಿ ಮತ್ತೆ ಹಿರೋ ಎನಿಸಿಕೊಂಡ ನಟ ಸೋನು ಸೂದ್

ನವದೆಹಲಿ ಜೂ.10 : ಬಾಲಿವುಡ್ ನಟ ಸೋನು ಸೂದ್ ಅವರು ಸಿನಿಮಾಗಳಲ್ಲಿ ವಿಲನ್ ಆಗಿ ಹೆಚ್ಚು ಪ್ರಸಿದ್ದಿ ಗಳಿಸಿಕೊಂಡಿದ್ದರೂ ನಿಜ ಜೀವನದಲ್ಲಿ ಅವರೊಬ್ಬ ಹಿರೋ ಆಗಿದ್ದಾರೆ. ಈ ಹಿಂದೆಯೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದ ಅವರು ಇದೀಗ ನಾಲ್ಕು ಕೈ, ನಾಲ್ಕು ಕಾಲು ಇದ್ದ ಪುಟ್ಟ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಅವರೊಬ್ಬ ನಿಜವಾದ ಹಿರೋ ಎನಿಸಿಕೊಂಡಿದ್ದಾರೆ.

ಬಿಹಾರದ ಪುಟ್ಟ ಗ್ರಾಮದ ಹುಡುಗಿ ಚಹುಮುಖಿಯು ದೇಹದಲ್ಲಿ ನಾಲ್ಕು ಕೈ ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ್ದಳು. ಮಗುವಿನ ಪೋಷಕರಿಗೆ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದ ಸಂದರ್ಭದಲ್ಲಿ, ಮಗುವಿನ ಚಿಕಿತ್ಸೆಯ ಖರ್ಚನ್ನು ಸೋನು ಸೂದ್ ಅವರೇ ನೋಡಿಕೊಂಡಿದ್ದಾರೆ. ಇದೀಗ ಶಸ್ತ್ರ ಚಿಕಿತ್ಸೆಯ ನಂತರ ಮಗುವಿನ ಆರೋಗ್ಯ ಸುಧಾರಿಸಿದೆ ಎಂದು ಮಗುವಿನ ಸದ್ಯದ ಆರೋಗ್ಯ ಸ್ಥಿತಿಯ ಕುರಿತು ಸೋನು ಸೂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಬಹುಭಾಷಾ ಕಲಾವಿದನಾಗಿ ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರೊಬ್ಬ ಪ್ರತಿಭಾನ್ವಿತ ಕಲಾವಿದ ಆಗಿರುವ ಜೊತೆಗೆ ಓರ್ವ ಉತ್ತಮ ಸಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಅವರ ಬಾಳಿಗೆ ಬೆಳಕಾಗಿ ಸಾಥ್ ನೀಡಿದ್ದಾರೆ. ಕೊವೀಡ್ ವೇಳೆಯಲ್ಲಿ ಸಾಕಷ್ಟು ಜನರ ಕಷ್ಟಕ್ಕೆ ಸೋನು ಸೂದ್ ಅವರು ಮಿಡಿದಿದ್ದಾರೆ. ಇದೀಗ ಇವರ ಈ ಕಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ತಾರೆಯರು ಸೋನು ಸೂದ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!