ಶಾಲೆ, ಕಾಲೇಜುಗಳ ಪುನರಾರಂಭಕ್ಕೆ ಇನ್ನೂ ಸಮಯ ನಿಗದಿಪಡಿಸಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಹುತೇಕ ರಾಜ್ಯಗಳು ಶಾಲೆಗಳ ಪುನರಾರಂಭಕ್ಕೆ ಒಲವು ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಇನ್ನೂ ಶಾಲೆಗಳ ಆರಂಭಕ್ಕೆ ದಿನಾಂಕ ನಿಗದಿಪಡಿಸಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ ಕೊನೆಗೆ ಅಥವಾ ಅಕ್ಟೋಬರ್ ವೇಳೆಗೆ ಪ್ರೌಢಶಾಲಾ ಶಿಕ್ಷಣದ ನಂತರ ತರಗತಿಗಳಿಗೆ ಶಾಲೆಗಳನ್ನು ಆರಂಭಿಸುವ ಸಾಧ್ಯತೆ ಬಗ್ಗೆ ಸರ್ಕಾರ ಚಿಂತಿಸುತ್ತಿದ್ದು ಈ ಬಗ್ಗೆ  ಕೂಡ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್-19 ಸೋಂಕಿನ ಪರಿಸ್ಥಿತಿ ನೋಡಿಕೊಂಡು ಶಾಲೆಗಳ ಪುನರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಂದು ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿ ಬೇರೆ ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳು ಶಾಲೆಗಳ ಪುನರಾರಂಭ ಸದ್ಯ ಮಾಡುವ ಬಗ್ಗೆ ಒಲವು ವ್ಯಕ್ತಪಡಿಸಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರೌಢಶಿಕ್ಷಣ ತರಗತಿಗಳನ್ನು ಸೆಪ್ಟೆಂಬರ್ ಕೊನೆಯ ವೇಳೆಗೆ ಆರಂಭಿಸುವ ಸಾಧ್ಯತೆಗಳ ಬಗ್ಗೆ ನೋಡಲಾಗುತ್ತಿದೆ. ಆದರೆ ಅದಿನ್ನೂ ಅಂತಿಮ ನಿರ್ಧಾರವಲ್ಲ. ನಿರ್ಧಾರ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಲಹೆ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದು ಆಯಾ ರಾಜ್ಯಗಳು ತಮ್ಮ ಜಿಲ್ಲೆಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡಬೇಕಾಗುತ್ತದೆ.

ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ದೇಶಾದ್ಯಂತ ಲಾಕ್ ಡೌನ್ ಮಾಡಿದ ಕೇಂದ್ರ ಸರ್ಕಾರ ಮಾರ್ಚ್ 16ರಿಂದ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!