ಸುಖಾಂತ್ಯದತ್ತ ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಸಚಿನ್ ಪೈಲಟ್ ಮತ್ತೆ ‘ಕೈ’ವಶ
ನವದೆಹಲಿ: ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿಂಗಳ ಹಿಂದೆ ಬಂಡಾಯ ಸಾರುವ ಮೂಲಕ ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡು, ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದ ಸಚಿನ್ ಪೈಲಟ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಮರಳಲು ಮುಂದಾಗಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಂಡಾಯ ಸಾರಿದ್ದ ಸಚಿನ್ ಪೈಲಟ್ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರ ಜೊತೆ ಸೋಮವಾರ ಹಲವು ತಾಸು ಮಾತುಕತೆ ನಡೆಸಿದರು. ಈ ವೇಳೆ ಪೈಲಟ್ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಚರ್ಚೆ ಕೂಡ ನಡೆಯಿತು. ಇದಾದ ಬಳಿಕ ಪಕ್ಷವೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತು.
ಸಚಿನ್ ಪೈಲಟ್ ಅವರ ಜೊತೆ ರಾಹುಲ್, ಪ್ರಿಯಾಂಕಾ ಅವರು ಮುಕ್ತ ಮಾತುಕತೆ ನಡೆಸಿದ್ದಾರೆ. ಪಕ್ಷ ಹಾಗೂ ರಾಜಸ್ಥಾನ ಸರ್ಕಾರದ ಹಿತಕ್ಕಾಗಿ ದುಡಿಯುವ ಬದ್ಧತೆಯನ್ನು ಸಚಿನ್ ಪೈಲಟ್ ಅವರು ವ್ಯಕ್ತಪಡಿಸಿದ್ದಾರೆ. ಅವರು ಹಾಗೂ ಅವರ ಜೊತೆಗಿರುವ ಬಂಡಾಯ ಶಾಸಕರು ಎತ್ತಿರುವ ವಿಷಯಗಳ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತ್ರಿಸದಸ್ಯ ಸಮಿತಿ ರಚನೆ ಮಾಡಿದ್ದಾರೆಂದು ಪಕ್ಷದ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆ.14 ರಂದು ರಾಜಸ್ಥಾನ ವಿಧಾನಸಭಾ ಅಧಿವೇಶನ ಇದ್ದು, ಬಹುಮತ ಪರೀಕ್ಷೆ ನಡೆಯುವ ನಿರೀಕ್ಷೆಗಳಿತ್ತು. ಪೈಲಟ್ ಮರುಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಎದುರಾಗಿದ್ದ ಪತನ ಭೀತಿ ಇದೀಗ ನಿವಾರಣೆಯಾದಂತಾಗಿದೆ ಎಂದು ಹೇಳಲಾಗುತ್ತಿದೆ.