ಬ್ರಿಟೀಷರೊಂದಿಗೆ ಹೊಂದಾಣಿಕೆ ಮಾಡಿಕೊಂಡವರಿಂದ ಪಾಠ ಅಗತ್ಯವಿಲ್ಲ: ಅಶೋಕ್
ಹಿರಿಯಡ್ಕ: ಅಂದು ಬ್ರಿಟೀಷರ ಗುಲಾಮರಾಗಿದ್ದವರು ಇಂದು ದೇಶ ಭಕ್ತಿಯ ಗುತ್ತಿಗೆ ಪಡೆದು ದೇಶಭಕ್ತಿಯ ಸರ್ಟಿಫಿಕೆಟ್ ಹಂಚುತ್ತಿದ್ದಾರೆ ಎಂದು 78 ವರ್ಷಗಳ ಹಿಂದೆ ಬ್ರಿಟೀಷರನ್ನು ದೇಶದಿಂದ ತೊಲಗಿಸಲು ಗಾಂಧೀಜಿ ಪ್ರಾರಂಭಿಸಿದ ಕ್ವಿಟ್ ಇಂಡಿಯಾ ಚಳುವಳಿಯನ್ನು ನೆನಪಿಸುತ್ತಾ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಅವರು ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕಾಪು ಬ್ಲಾಕ್ ಸೇವಾದಳದ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ 78ನೇ ಕ್ವಿಟ್ ಇಂಡಿಯಾ ಚಳುವಳಿ ಆಚರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ 1942 ಅಗೊಸ್ಟ್ 7 ರಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಕೊನೆಯಲ್ಲಿ ಗಾಂಧೀಜಿಯವರು ಬ್ರಿಟೀಷರನ್ನು ಭಾರತ ದೇಶದಿಂದ ಒದ್ದೋಡಿಸಲು ಕೊನೆಯ ಅಸ್ತ್ರವಾಗಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಆಂದೋಲನಕ್ಕೆ ಕರೆಕೊಟ್ಟರು. ಮಾಡು ಅಥವಾ ಮಡಿ ಎಂಬ ಧ್ಯೇಯ ವಾಕ್ತದೊಂದಿಗೆ ಕರೆ ಕೊಟ್ಟ ಈ ಕರೆಗೆ ಇಡೀ ದೇಶವೇ ಸ್ಪಂದಿಸಿತ್ತು.
ಅಂದು ಬ್ರಿಟೀಷ್ ಸರಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಹಿಂದೂ ಮಹಾಸಭಾದ ಮೂಲಕ ಆರಿಸಿ ಬಂದಿದ್ದ ಪ್ರತಿನಿಧಿಗಳು ಯಾರೊಬ್ಬರೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿಲ್ಲ. ಇಂದು ಅವರೇ ದೇಶಪ್ರೇಮದ ಬಗ್ಗೆ ಕಾಂಗ್ರೆಸ್ಸಿಗೆ ಪಾಠ ಹೇಳುತ್ತಿರುವುದು ವಿಪರ್ಯಾಸ ಎಂದರು. ಹಿರಿಯ ಕಾಂಗ್ರೆಸಿಗರಾದ ಜಯಂತ್ ರಾವ್ ಹಿರಿಯಡ್ಕರವರು ಮಾತನಾಡುತ್ತಾ ಅಂದಿನ ಆಂದೋಲನದಂತೆ ಇಂದು ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿಯನ್ನು ತೊಲಗಿಸಿ ಆಂದೋಲನವನ್ನು ಹಮ್ಮಿಕೊಳ್ಳಬೇಕಾಗಿದೆ.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ರಾವ್, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀನಾರಾಯಣ ಪ್ರಭು, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚರಣ್ ವಿಠಲ್, ಸೇವಾದಳ ಮುಖ್ಯ ಸಂಘಟಕರಾದ ಕಿಶೋರ್ ಎರ್ಮಾಳ್, ಶರತ್ ಕುಮಾರ್ ಬೈರಂಪಳ್ಳಿ, ಜಯವಂತ ರಾವ್, ಹಮದ್ ಮೊದಲಾದವರು ಉಪಸ್ಥಿತರಿದ್ದರು.