ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಶನಿವಾರ ಆಂಜನೇಯಸ್ವಾಮಿ ಮೂಲ ಮಂದಿರ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಗೊಳಿಸಲಾಗಿದೆ.
ತಹಶೀಲ್ದಾರ್ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಭೆ, ಮೆರವಣಿಗೆ, ಪ್ರತಿಭಟನೆ ಅಥವಾ ರಥಯಾತ್ರೆಗಳನ್ನು ನಿರ್ಬಂಧಿಸಿದ್ದಾರೆ. ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳು ಜೂನ್ 3ರ ಸಂಜೆ 6 ಗಂಟೆಯಿಂದ ಜೂನ್.5ರ ಬೆಳಿಗ್ಗೆ 6 ಗಂಟೆಯವರೆಗೆ ಸೆಕ್ಷನ್144 ಜಾರಿಯಲ್ಲಿರಲಿದೆ.
ಮಂದಿರಕ್ಕೆ ಚಲೋ ಹಿನ್ನೆಲೆಯಲ್ಲಿ ಪ್ರತೀ ಶನಿವಾರ ನಡೆಯುವ ಸಂತೆಯನ್ನು ಮುಂದೂಡಿರುವುದಾಗಿ ಪುರಸಭಾ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸುವ ವಿಶ್ವ ಹಿಂದೂ ಪರಿಷತ್ ಸದಸ್ಯರು ಜಾಮಿಯಾ ಮಸೀದಿಯನ್ನು ಪ್ರವೇಶಿಸುವ ಸಂಭವವಿರುವುದರಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಅಂದು ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ನಡೆಯುವ ಶನಿವಾರದ ಸಂತೆ ರದ್ದುಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ರೈತರು, ವರ್ತಕರು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಸಂತೆಯನ್ನು ಜೂನ್ 6ರ ಭಾನುವಾರಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಈ ನಡುವೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ. 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ನಾಲ್ಕು ಕಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಎಸ್’ಪಿ ಎನ್ ಸತೀಶ್ ಅವರ ನೇತೃತ್ವದಲ್ಲಿ ರೂಟ್ ಮಾರ್ಚ್ ಕೂಡ ನಡೆಯಲಿದೆ.
ಹಿಂದೂಪರ ಸಂಘಟನೆಗಳಿಂದ ಶ್ರೀರಂಗಪಟ್ಟಣದಲ್ಲಿ ಮೂಲ ಮಂದಿರ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಾಮಿಯ ಮಸೀದಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಪೊಲೀಸರನ್ನು ಮಸೀದಿಗೆ ಕಣ್ಗಾವಲು ಹಾಕಿ ಭದ್ರತೆ ನಿಯೋಜಿಸಲಾಗಿದೆ. ಹಿಂದೂ ಸಂಘಟನೆಗಳ ಶ್ರೀರಂಗಪಟ್ಟಣ ಚಲೋಗೆ ಕಡಿವಾಣ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ಬೆಳವಣಿಗೆ ಕುರಿತು ಜಿಲ್ಲಾಧಿಕಾರಿ ಡಾ.ಅಶ್ವಥಿಯವರು ಮಾತನಾಡಿ, ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಹಿಂದೂಪರ ಸಂಘಟನೆಗಳ ಮನವಿಯನ್ನು ಭಾರತೀಯ ಪುರಾತತ್ವ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿಗಾಗಿ ಕಾಯುತ್ತಿದ್ದೇವೆಂದು ಹೇಳಿದ್ದಾರೆ.
ಕೇಸರಿ ಶಾಲು ಹಾಗೂ ಧ್ವಜವನ್ನು ಹಿಡಿದು ದ್ವಿಚಕ್ರ ವಾಹನಗಳಲ್ಲಿ ಆಂಜನೇಯಸ್ವಾಮಿ ಮೂಲ ಮಂದಿರ ಚಲೋ ಆರಂಭಿಸಿರುವ ಭಜರಂಗ ದಳ ಹಾಗೂ ವಿಹೆಚ್’ಪಿ ಕಾರ್ಯಕರ್ತರು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ. ವಿಹೆಚ್’ಪಿ ಮಂದಿರ ಚಲೋ ಕರೆ ನೀಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಸ್ಥಳೀಯ ಆಡಳಿತ ಮಂಡಳಿ ಅನುಮತಿ ನಿರಾಕರಿಸಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಶಾಂತಿ, ಕಾನೂನು ಸುವ್ಯಸ್ಥೆ ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ನಡುವೆ ಸ್ಥಳೀಯ ಆಡಳಿತ ಮಂಡಳಿ ನಿರ್ಬಂಧ ಹೇರಿರುವುದನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಖಂಡಿಸಿದ್ದಾರೆ.
ಮಸೀದಿಯಲ್ಲಿ ಗಣಪತಿ ದೇವಾಲಯವಿದೆ. ದೇವಾಲಯದ ಟ್ಯಾಂಕ್, ಬಾವಿ ಇವೆಲ್ಲವೂ ಇದ್ದರು, ಮಸೀದಿಯಲ್ಲಿ ಮದರಸಾ ನಡೆಸಲಾಗಿದೆ. ನಮಾಜ್ ಮಾಡಲಾಗಿದೆ. ಇದು ತಪ್ಪು. ಇದನ್ನು ನಾವು ತಡೆಯಬೇಕು. ಅವರನ್ನು ಹೊರಗೆ ಹಾಕಬೇಕು. ನಮ್ಮ ಪ್ರತಿಭಟನೆಯನ್ನು ತಡೆಯುತ್ತಿರುವ ಬಿಜೆಪಿ ಸರ್ಕಾರವನ್ನು ಖಂಡಿಸುತ್ತೇನೆಂದು ಹೇಳಿದ್ದಾರೆ.
ಜಾಮಿಯಾ ಮಸೀದಿಯಲ್ಲಿ ಆಂಜನೇಯ ದೇವಾಲಯವಿತ್ತು. ಈ ದೇವಾಲಯವನ್ನು ನಾಶಪಡಿಸಿದ್ದ ಟಿಪ್ಪು ಸುಲ್ತಾನ್ ಮಸೀದಿ ನಿರ್ಮಿಸಿದ್ದ ಎಂದು ಎಂದು ಬಲಪಂಥೀಯ ಪ್ರತಿಪಾದಿಸುತ್ತಿವೆ, ಮಸೀದಿಯ ಸಮೀಕ್ಷೆಯನ್ನು ನಡೆಸುವಂತೆ ಕೋರಿ ಜಿಲ್ಲಾ ಅಧಿಕಾರಿಗಳಿಗೆ ಈ ಸಂಘಟನೆಗಳು ಪತ್ರ ಬರೆದಿದ್ದು, ಸಮೀಕ್ಷೆಯಲ್ಲಿ ಇದು ನಿಜವೆಂದು ಕಂಡು ಬಂದಿದ್ದೇ ಆದರೆ, ಆಂಜನೇಯ ದೇವಾಲಯವನ್ನು ಹಿಂದೂಗಳಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದೆ.