ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟ ಸರ್ಕಾರ: ಸಚಿವರಿಗೆ ಸಿದ್ದರಾಮಯ್ಯ ಪ್ರಶ್ನೆಗಳ ಪ್ರವಾಹ!

ಬೆಂಗಳೂರು: ಅತಿವೃಷ್ಟಿ ಹಾನಿಗೆ ಪರಿಹಾರ ಕಲ್ಪಿಸುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿಗೆ ರಾಜ್ಯಸರ್ಕಾರ ಕೈಕಾಲು ಬಿಡುತ್ತಿದೆ. ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ, ಎಂದಿನಂತೆ ಸರ್ಕಾರದಿಂದ ಉತ್ತರ ಇಲ್ಲ. ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ’ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಚಿವರ ಮೇಲೆ ಪ್ರಶ್ನೆಗಳ ಪ್ರವಾಹ ಹರಿಸಿರುವ ಸಿದ್ದರಾಮಯ್ಯ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ವಿ. ಸೋಮಣ್ಣ, ಸುರೇಶ್ ಕುಮಾರ್, ಶಶಿಕಲಾ ಜೊಲ್ಲೆ ಅವರಿಗೆ ಟ್ವೀಟ್ ಮೂಲಕ ಪ್ರಶ್ನೆಗಳನ್ನು ಹಾಕಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, ಕಳೆದ ವರ್ಷದ ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು? ಅವುಗಳಲ್ಲಿ ಎಷ್ಟು ಪೂರ್ಣವಾಗಿ ದುರಸ್ತಿಗೊಂಡಿವೆ? ಖರ್ಚಾಗಿರುವ ಹಣ ಎಷ್ಟು? ಬಾಕಿ ಉಳಿದಿರುವ ಕಾಮಗಾರಿಗಳೆಷ್ಟು? ಈಗಲಾದರೂ ಈ ವಿವರ ನೀಡುವಿರಾ ಎಂದು ಕೇಳಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ನೀಡಿದ ಪರಿಹಾರ ಎಷ್ಟು? ಕಟ್ಟಿದ ಹೊಸ ಮನೆಗಳೆಷ್ಟು? ಪ್ರತಿಬಾರಿ ನೆರೆ ನೀರಿನಲ್ಲಿ ಮುಳುಗುವ ಮನೆಗಳೆಷ್ಟು? ಎಷ್ಟು ಕುಟುಂಬಗಳು ಶೆಡ್‌ನಲ್ಲಿವೆ?ಎಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿವೆ? ಎಂದು ಕೇಳಿದ್ದಾರೆ.

ಶಶಿಕಲಾ ಜೊಲ್ಲೆ ಅವರಿಗೂ ಪ್ರಶ್ನೆ ಕೇಳಿರುವ ಸಿದ್ದರಾಮಯ್ಯ ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಅಂಗನವಾಡಿ ಕಟ್ಟಡಗಳೆಷ್ಟು? ಅವುಗಳಲ್ಲಿ ದುರಸ್ತಿವಾಗಿರುವುದೆಷ್ಟು? ಪುನರ್ ನಿರ್ಮಾಣವಾಗಿದ್ದೆಷ್ಟು? ಇವುಗಳ ದುರಸ್ತಿ-ಪುನರ್ ನಿರ್ಮಾಣಕ್ಕೆ ಖರ್ಚಾದ ಹಣ ಎಷ್ಟು? ಎಂದು ಮಾಹಿತಿಯನ್ನು ಸಿದ್ದರಾಮಯ್ಯ ಕೇಳಿದ್ದಾರೆ.

ಇನ್ನು,  ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟು ಕಟ್ಟಡಗಳನ್ನು ದುರಸ್ತಿ ಪಡಿಸಲಾಗಿದೆ ಮತ್ತು ಪುನರ್ ನಿರ್ಮಿಸಿಗೊಳ್ಳಲಾಗಿದೆ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು? ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ  ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!