ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ ಹಂಪ ನಾಗರಾಜಯ್ಯ ರಾಜಿನಾಮೆ
ಬೆಂಗಳೂರು ಮೇ 30: ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಹಾಗೂ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಖ್ಯಾತ ಸಾಹಿತಿ ನಾಡೋಜ ಹಂಪ ನಾಗರಾಜಯ್ಯರವರು ರಾಜಿನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ರಾಜಿನಾಮೆ ನೀಡಿರುವ ಅವರು, “ಭಾರತೀಯ ಸಾಹಿತ್ಯದಲ್ಲಿ ಕರ್ನಾಟಕಕ್ಕೆ ಗೌರವ ತಂದ ಮಹಾಕವಿ ಕುವೆಂಪುರ ಕೊಡುಗೆಗಳನ್ನರಿತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು ಸ್ಥಾಪಿಸಲಾಗಿತ್ತು.ಆದರೆ ಇದೀಗ ಕುವೆಂಪು ಹುಟ್ಟಿರುವ ಗೌರವಾನ್ವಿತ ದೊಡ್ಡಜನಾಂಗವೊಂದನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ನಮ್ಮ ರಾಷ್ಟ್ರಗೀತೆಯಾದ ನಾಡಗೀತೆಯನ್ನೂ ಲೇವಡಿ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಬದಲು ಸರಕಾರ ಜವಾಬ್ದಾರಿಯ ಸ್ಥಾನ ನೀಡಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ”. ಇದು “ಅವಾಚ್ಯ ಶಬ್ಧಗಳಿಂದ ಗೌರವಾನ್ವಿತರನ್ನು ನಿಂದಿಸಿದರೆ ಅವರಿಗೆ ಸರಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಅವಕಾಶಗಳಿವೆ ಎಂಬ ತಪ್ಪು ಸಂದೇಶ ಹೊರಡಿಸಿದಂತಾಗುತ್ತದೆ” ಎಂದು ಉಲ್ಲೇಖಿಸಿದ್ದಾರೆ.
ಹಾಗೂ “ರಾಷ್ಟ್ರಕವಿ ಕುವೆಂಪುರನ್ನೂ, ನಮ್ಮ ಪವಿತ್ರ ನಾಡಗೀತೆಯನ್ನು ಅಪಮಾನಿಸುತ್ತಿದ್ದರೂ ಅದನ್ನು ನೋಡಿಕೊಂಡು ತೆಪ್ಪಗಿರುವುದು ನನಗೆ ಕಷ್ಟವಾಗಿದೆ. ಆದ್ದರಿಂದ ಸರಕಾರ ಸ್ಥಾಪಿಸಿರುವ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿರುವುದಾಗಿ ತಿಳಿಸಿ ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ.
ಒಂದು ವಾರಗಳ ಹಿಂದೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದ ಹಂಪನಾ, “ಶಾಲೆಗಳು ಆರಂಭವಾಗಿವೆ, ಆದರೆ ಪಠ್ಯಪುಸ್ತಕ ವಿವಾದಗಳ ಚಕ್ರತೀರ್ಥದಲ್ಲಿ ಒದ್ದಾಡುತ್ತಾ ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಈ ಅನಾರೋಗ್ಯಕರ ಬೆಳವಣಿಗೆಗಳ ಬಗ್ಗೆ ತಟಸ್ಥವಾಗಿರದೇ ಸರಕಾರ ಕೂಡಲೇ ಕಾರ್ಯಪ್ರವೃತ್ತವಾಗ ಬೇಕು ಹಾಗೂ ಹಿಂದಿನ ಪಠ್ಯವನ್ನೇ ಮುಂದುವರಿಸುವಂತೆ ಸರಕಾರ ಸುತ್ತೋಲೆ ಹೊರಡಿಸಬೇಕು” ಎಂದು ಪತ್ರದ ಮೂಲಕ ಮನವಿ ಮಾಡಿದ್ದರು.