ಮಣಿಪಾಲ: ಕೆಎಂಸಿ ಪ್ರಯೋಗಾಲಯ ಸೇವೆಗಳಿಗೆ ಎನ್ಎಬಿಎಲ್’ನಿಂದ ಮರುಮಾನ್ಯತೆ

ಮಣಿಪಾಲ, ಮೇ 27: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಪ್ರಯೋಗಾಲಯ ಸೇವೆಗಳಿಗೆ  ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳಿಗೆ  ಇರುವ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ  (“ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೋರೇಟರೀಸ್) ಮರುಮಾನ್ಯತೆ ಪಡೆದಿವೆ, ಇದು ಭಾರತದ ಗುಣಮಟ್ಟ ಮಂಡಳಿಯ ಅಂಗ ಸಂಸ್ಥೆಯಾಗಿದೆ. ಇಂದು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಅವರು ಜಂಟಿಯಾಗಿ ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ. ರವೀಂದ್ರ ಮರಡಿ ಅವರಿಗೆ ಮಾನ್ಯತಾ ಪ್ರಮಾಣಪತ್ರ ಹಸ್ತಾಂತರಿಸಿದರು.  

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಈ ಮಾನ್ಯತೆ ಕೊಡಿಸುವ ಮೂಲಕ ಮತ್ತೊಂದು ಕಿರೀಟ ತೊಡಿಸಲು ಕಾರಣರಾದ ಇಡೀ ತಂಡವನ್ನು ಡಾ.ಎಚ್.ಎಸ್.ಬಲ್ಲಾಳ್ ಅಭಿನಂದಿಸಿದರು. ಇದಲ್ಲದೆ, ನ್ಯಾಕ್ ತಂಡವು ಇತ್ತೀಚೆಗೆ ಭೇಟಿ ನೀಡಿದ್ದು, ಇಡೀ ಮಾಹೆ ಗುಂಪಿನಲ್ಲಿ ನಾವು ನಿರ್ವಹಿಸುತ್ತಿರುವ ಗುಣಮಟ್ಟದ ಬಗ್ಗೆ ತುಂಬಾ ಪ್ರಶಂಸೆ ವ್ಯಕ್ತಪಡಿಸಿತು ಎಂದು ಹೇಳಿದರು. ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಮಾತನಾಡಿ, ಯಾವುದೇ ಸಂಸ್ಥೆಗೆ ಗುಣಮಟ್ಟ ಮತ್ತು ಪ್ರಮಾಣೀಕರಣ ಮಾನ್ಯತೆ ಬಹಳ ಮುಖ್ಯ. ಇದರಲ್ಲಿ ಮಣಿಪಾಲದ ಕಸ್ತೂರ್ಬಾ  ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾವಾಗಲೂ ಮುಂಚೂಣಿಯಲ್ಲಿದೆ. ಮತ್ತು ಇದು ನಿರಂತರ ಪ್ರಕ್ರಿಯೆಯಾಗಿದೆ. ಎಲ್ಲಾ ಹೊಸ ಸಾಧನೆಗಳು ನಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತದೆ. ಸಾರ್ವಜನಿಕರಿಗೆ ಪ್ರಯೋಗಾಲಯ ಸೇವೆಗಳಲ್ಲಿ ಗುಣಮಟ್ಟದ ಸೇವೆಯನ್ನು ನೀಡಲು ಈ ಮಾನ್ಯತೆ  ಸಹಾಯ ಮಾಡುತ್ತದೆ ಎಂದರು. ಮಾಹೆ ಮಣಿಪಾಲದ ಡಾ.ಪಿ.ಎಲ್.ಎನ್.ಜಿ.ರಾವ್,  (ವೈದ್ಯಕೀಯ ಮತ್ತು ದಂತ ವಿಜ್ಞಾನ), ಡಾ.ವೆಂಕಟರಾಯ ಪ್ರಭು (ಸಹ -ಉಪಕುಲಪತಿ ಆರೋಗ್ಯ ವಿಜ್ಞಾನ), ಡಾ. ನಾರಾಯಣ ಸಭಾಹಿತ್, ಕುಲಸಚಿವರು, ಎಲ್ಲಾ ಪ್ರಯೋಗಾಲಯಗಳ ಮುಖ್ಯಸ್ಥರು ಮತ್ತು ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ.ರವೀಂದ್ರ ಮರಡಿ ಅವರು ಅವಲೋಕನ ನೀಡುತ್ತಾ, “ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೋರೇಟರೀಸ್ (ಎನ್‌ಎಬಿಎಲ್)” ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳು, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲಕ್ಕೆ 2024 ರವರೆಗೆ ಅಂದರೆ ಇನ್ನೂ ಎರಡು ವರ್ಷಗಳವರೆಗೆ ಮಾನ್ಯತೆಯನ್ನು ನವೀಕರಿಸಿದೆ. ಪ್ರಮಾಣಿತ ಐಎಸ್ಒ 15189 ಪ್ರಕಾರ ಎನ್‌ಎಬಿಎಲ್ ನಿಂದ 400 ಕ್ಕೂ ಹೆಚ್ಚು ಪರೀಕ್ಷೆಗಳು ಮಾನ್ಯತೆ ಪಡೆದಿವೆ. ಪ್ರಯೋಗಾಲಯವು ವಿಶ್ವಾಸಾರ್ಹ ಪರೀಕ್ಷೆ ಮತ್ತು ವರದಿಗಳಿಗಾಗಿ ಕಟ್ಟುನಿಟ್ಟಾದ ಗುಣಮಟ್ಟದ ಕ್ರಮವನ್ನು ಅನುಸರಿಸುತ್ತದೆ. ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀಡಿದ ವರದಿಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ಸ್ವೀಕರಿಸಲಾಗುತ್ತದೆ. ಈ ಮಾನ್ಯತೆಯು ರೋಗಿಯ ಪ್ರಯೋಗಾಲಯ ಫಲಿತಾಂಶದ ಗುಣಮಟ್ಟವನ್ನು ಸುಧಾರಿಸುತ್ತದೆ, ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಗುಣಮಟ್ಟ ಮತ್ತು ಸುರಕ್ಷತೆಯ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!