ಉಡುಪಿ:ಹೊರ ಜಿಲ್ಲೆಗಳಿಂದ ಬರುವ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ವಿಶೇಷ ನಿಗಾ- ಎಡಿಜಿಪಿ ಆಲೋಕ್‌

ಉಡುಪಿ ಮೇ‌ 27: ಜಿಲ್ಲೆಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಅದರಲ್ಲೂ ಹೊರ ಜಿಲ್ಲೆಗಳಿಂದ ಬಂದು ಆತ್ಮಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎಡಿಜಿಪಿ ಆಲೋಕ್‌ ಕುಮಾರ್‌ ಅವರು, ಉಡುಪಿಯಲ್ಲಿ ಹೊರಗಿನವರು ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದ ಅವರು,‌ ಇಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನಿನ ಇತಿಮಿತಿಯಲ್ಲಿ ಏನೇನೂ ಮಾಡಲು ಸಾಧ್ಯವೋ ಆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಹೊರ ಜಿಲ್ಲೆಗಳಿಂದ ಬರುವ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ಈ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ಕರಾವಳಿಯ ಸಮಸ್ಯೆಯನ್ನು ಅರಿಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಮೊದಲಿನಿಂದಲೂ ಈ ಪ್ರದೇಶದಲ್ಲಿ ಅಂಡರ್‌ ವರ್ಲ್ಡ್ ಅನಂತರ ಬೇರೆ ಬೇರೆ ಪ್ರಕರಣ, ಈಗ ಹಿಜಾಬ್‌ ಹೀಗೆ ಸೂಕ್ಷ್ಮ ಪ್ರದೇಶವಾಗಿಯೇ ಉಳಿದಿದೆ. ಯಾವುದೇ ಪ್ರಕರಣ ಬಂದರೂ ಪೊಲೀಸ್‌ ಇಲಾಖೆ ಸಮರ್ಥವಾಗಿ ಎದುರಿಸಲಿದೆ. ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಕೆಲವು ತಾಂತ್ರಿಕ ವಿಷಯ ಇರುವುದರಿಂದ ತನಿಖೆ ಇನ್ನಷ್ಟು ಸಮಯ ಹಿಡಿಯಲಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು ಸಮಿತಿ ಇನ್ನೂ ವರದಿ ನೀಡಿಲ್ಲ ಎಂದು ಹೇಳಿದರು.

ಶಾಂತಿಭಂಗ ಮಾಡಲು ಬಿಡುವುದಿಲ್ಲ ಎಂದ ಅವರು, ಸಮಸ್ಯೆ ಎಲ್ಲ ಕಾಲದಲ್ಲೂ ಇದ್ದೇ ಇರುತ್ತದೆ. ಹಿಜಾಬ್‌ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯ ಮಾಡುತ್ತಿದ್ದೇವೆ. ಶಾಂತಿಭಂಗ ಮಾಡಲು ಬಿಡುವುದಿಲ್ಲ. ಮಂಗಳೂರಿನಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ ಎಂದರು. ಇನ್ನು ಭಡ್ತಿ ಸಹಿತ ಸಿಬಂದಿ ವರ್ಗದ ಯಾವುದೇ ಸಮಸ್ಯೆಯಿದ್ದರೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬಹುದು. ಭಡ್ತಿ ವಿಷಯವಾಗಿ ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ನಿಯಮವನ್ನು ಪಾಲನೆ ಮಾಡಲಾಗುವುದು ಎಂದರು. ಐಜಿಪಿ ದೇವಜ್ಯೋತಿ ರೇ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!