ಮಾದಕ ವಸ್ತು ಸೇವನೆ ಪ್ರಕರಣ: ಮೂವರು ಪೊಲೀಸರು ವಶಕ್ಕೆ
ಉಡುಪಿ ಮೇ 25 (ಉಡುಪಿ ಟೈಮ್ಸ್ ವರದಿ): ಮಣಿಪಾಲ ಹಾಗೂ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೂರು ಪ್ರತ್ಯೇಕ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗಲಕೋಟೆಯ ಬಾದಾಮಿ ತಾಲೂಕಿನ ಸಚಿನ್ ಯಮುನಪ್ಪ ಹಾಲನ್ನವರ್ (20), ಉಡುಪಿಯ ಶುಭಾಷ್ ನಗರದ ಪ್ರೇಮನಾಥ್ ಯಾನೆ ರೇವು (21), ಕಾಪುವಿನ ಮೊಹಮ್ಮದ್ ನಿಸ್ಸಾರ್(34) ಪೊಲೀಸರು ವಶಕ್ಕೆ ಪಡೆದವರು.
ಇಂದು ಬೆಳಿಗ್ಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ ಅವರು ಕರ್ತವ್ಯದಲ್ಲಿ ಇದ್ದ ವೇಳೆ ಮಣಿಪಾಲ ವಿದ್ಯಾರತ್ನನಗರದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ಅಮಲಿನಲ್ಲಿ ಇದ್ದ ಸಚಿನ್ ಯಮುನಪ್ಪ ಹಾಲನ್ನವರ್ ಮತ್ತು ಪ್ರೇಮನಾಥ್ ಯಾನೆ ರೇವು ಎಂಬಿಬ್ಬರನ್ನು ಹಾಗೂ ಶಿರ್ವ ಪೊಲೀಸರು ಕಾಪು ತಾಲೂಕಿನ ಶಿರ್ವಾ ಗ್ರಾಮದ ಶಿರ್ವ ಮಸೀದಿಯ ಬಳಿ ಇರುವ ಬಸ್ಸು ನಿಲ್ದಾಣದ ಬಳಿ ಸಿಗರೇಟ್‌ನಲ್ಲಿ ಗಾಂಜಾವನ್ನು ಸೇರಿಸಿ ಸೇದುತ್ತಿದ್ದ ಮೊಹಮ್ಮದ್ ನಿಸ್ಸಾರ್(34) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರು ಮಾದಕ ವಸ್ತು ಸೇವಿರುವುದನ್ನು ಖಚಿತ ಪಡಿಸಲು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರ ವೈದ್ಯಕೀಯ ಪರಿಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ಧೃಡಪಟ್ಟಿದೆ. ಇದೀಗ ಈ ಪ್ರಕರಣಗಳಿಗೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ಹಾಗೂ ಶಿರ್ವ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ