ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಕಪಿಲ್ ಸಿಬಲ್ ಸ್ಪರ್ಧೆ
ಲಖನೌ: ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಪಕ್ಷದ ವಿರುದ್ಧ ಬಂಡಾಯ ಘೋಷಿಸಿದ್ದ 23 ಮುಖಂಡರಲ್ಲಿ ಒಬ್ಬರಾಗಿರುವ ಕಪಿಲ್ ಸಿಬಲ್ ಅವರು, ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಡುವೆ ರಾಜಕೀಯಕ್ಕೆ ಸಂಬಂಧಿಸಿ ಮಾತುಕತೆ ನಡೆದ ಬಳಿಕ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದುಬಂದಿದೆ.
ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಕಪಿಲ್ ಸಿಬಲ್ ಅವರು ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದೆ.
ಮೇ.16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ. ಇದೀಗ ರಾಜ್ಯಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆಂದು ಕಪಿಲ್ ಸಿಬಲ್ ಅವರು ಹೇಳಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ಯಾವಾಗಲೂ ದೇಶದಲ್ಲಿ ಸ್ವತಂತ್ರ ಧ್ವನಿಯಾಗಲು ಬಯಸುತ್ತಿದ್ದೆ. ಪ್ರತಿಪಕ್ಷದಲ್ಲಿ ಇರುವಾಗ, ನಾವು ಮೋದಿ ಸರ್ಕಾರವನ್ನು ವಿರೋಧಿಸಲು ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.