ಅಧಿಕಾರಿಗಳ ತಪ್ಪಿನಿಂದಾಗಿ ಜನಪ್ರತಿನಿಧಿಗಳು ಜನರಿಂದ ಬೈಸಿಕೊಳ್ಳುವಂತಾಗಿದೆ- ಶಾಸಕ ರಘುಪತಿ ಭಟ್
ಉಡುಪಿ, ಮೇ24: ಆದಿಉಡುಪಿ – ಮಲ್ಪೆ, ಪರ್ಕಳ ಭೂ-ಸ್ವಾಧೀನ ಪಕ್ರಿಯೆಯಲ್ಲಿ ನಡೆದ ಅಧಿಕಾರಿಗಳ ಸಣ್ಣ ತಪ್ಪಿನಿಂದಾಗಿ ನಾವು ಜನಪ್ರತಿನಿಧಿಗಳು ಜನರ ಬಾಯಿಗೆ ಸಿಗುವಂತಾಗಿದೆಂದು ನಗರ ಸಭೆ ಸಾಮಾನ್ಯ ಸಭೆ ಶಾಸಕ ರಘುಪತಿ ಭಟ್ ಅವರು ಅಸಾಯಕತೆ ವ್ಯಕ್ತಪಡಿಸಿದರು.
ಇಂದು ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ನಗರ ಸಭೆ ಸಾಮಾನ್ಯ ಸಭೆಯಲ್ಲಿ ವಿಳಂಬ ಆಗುತ್ತಿರುವ ಪರ್ಕಳ, ಆದಿಉಡುಪಿ – ಮಲ್ಪೆ ರಸ್ತೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್ ಅವರು, ‘ಭೂ-ಸ್ವಾಧೀನ ಪಕ್ರಿಯೆಯಲ್ಲಿ ನಡೆದ ಅಧಿಕಾರಿಗಳ ಸಣ್ಣ ತಪ್ಪಿನಿಂದಾಗಿ ನಾವು ಜನಪ್ರತಿನಿಧಿಗಳು ಜನರ ಬಾಯಿಗೆ ಸಿಗುವಂತಾಗಿದೆ. ತಾಂತ್ರಿಕ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೆಗೆ ಮಾತುಕತೆ ನಡೆಸಿದ್ದು 45 ದಿನದೊಳಗೆ ವರ್ಕ್ ಆರ್ಡರ್ ಕೊಡುವಂತೆ ಮನವಿ ಮಾಡಲಾಗಿದೆ ಎಂದರು.
ಹಾಗೂ ಉಡುಪಿ ನಗರ ಭಾಗದಲ್ಲಿ ಹಳೆ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಕಟ್ಟಡ ಕೆಡವಲು ಟೆಂಡರ್ ಆಗಿದ್ದು ಸದ್ಯ ರೂ. 30 ಕೋಟಿ ವೆಚ್ಚದ 66000- 70000 ಚದರ ಅಡಿ ವಿಸ್ತೀರ್ಣ ಉಳ್ಳ ನಗರ ಸಭೆಯ ನೂತನ ಕಟ್ಟಡ ಒಳಗೊಂಡಂತೆ ವಾಣಿಜ್ಯ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಉಡುಪಿ ನಗರ ಸಭೆಯಲ್ಲಿ ಮನೆ ಕಟ್ಟಲು ಆನ್ಲೈನ್ ನಲ್ಲಿ ಅರ್ಜಿ ಹಾಕಿದರೆ ಮೂರು ತಿಂಗಳಾದರೂ ಅದು ಆಗುವುದಿಲ್ಲ ಕೇಳದರೆ ಅದು ಪ್ರಾಧಿಕಾರಕ್ಕೆ ಹೋಗಿದೆ ಅಂತಾರೆ. ಆದರೆ ಅರ್ಜಿಗಳು ಪ್ರಾಧಿಕಾರದಲ್ಲಿ ಹೋಗಿ ಅಲ್ಲೇ ಕುಳಿತುಕೊಳ್ಳುತ್ತದೆ. ಇದರಿಂದ ಇಲ್ಲಿ ಮನೆ ಕಟ್ಟುವವರು ತಂದಿರುವ ಕಲ್ಲು ಕರಗಿ ಹೋಗುತ್ತದೆ. ಮರಳು ನೀರಲ್ಲಿ ಹೋಗುತ್ತದೆ. ಹೀಗಿರುವಾಗ ಅಧಿಕಾರಿಗಳಿಗೆ ಬೈಬೇಕಾ ನಾವು ಬೈಗುಳ ತಿನ್ನಬೇಕಾ ಏನು ಮಾಡುವುದು ಎಂದು ಆಡಳಿತ ಪಕ್ಷದ ಸದಸ್ಯ ಕೃಷ್ಣ ರಾವ್ ಕೊಡಂಚ ಪ್ರಶ್ನಿಸಿದ್ದಾರೆ.
ಸದಸ್ಯರುಗಳಾದ ಅಮೃತ ಕೃಷ್ಣಮೂರ್ತಿ ಆಚಾರ್ಯ, ಸೇರಿದಂತೆ ಕೆಲವು ಸದಸ್ಯರು ಮಳೆಗಾಲದ ಪೂರ್ವ ತಯಾರಿಯಾದ ಚರಂಡಿ ಸ್ವಚ್ಛತೆ, ಹೂಳೆತ್ತುವುದು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೂರಿದರು.
ಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ವಿಜಯ್ ಕೊಡವೂರು ನಗರಸಭೆಯ ಎಸ್‌ಟಿಪಿ ಪ್ಲಾಂಟ್ ಮತ್ತು ಯುಜಿಡಿ ಯ ವ್ಯವಸ್ಥೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದರು. ಕಳೆದ ನಾಲ್ಕು ತಿಂಗಳಿಂದ ನೀರು ಶುದ್ಧಿಯಾಗಲು ಎಸ್‌ಟಿಪಿ ಪ್ಲಾಂಟ್ ಗೆ ಬ್ಲೀಚಿಂಗ್ ಪೌಡರ್ ಹಾಕುತ್ತಿಲ್ಲ ಎಂದು ಆರೋಪಿಸಿದರು. ಇದು ಅಧಿಕಾರಗಳ ಕೆಲಸದಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ ಎಂದು ಪರಿಸರ ಇಂಜಿನಿಯರ್ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು. ಅಲ್ಲದೆ ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತವಾಗುವಂತೆ ಸೂಚಿಸಿದರು. ಅಲ್ಲದೆ ಇಂದ್ರಾಣಿ ಹೊಳೆಗೆ ಬಿದ್ದಿರುವ ಮರಗಳನ್ನು ಕೂಡಲೇ ತೆರವು ಮಾಡಿ ನೀರು ಹರಿಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಎಸ್‌ಟಿಪಿ ಪ್ಲಾಂಟ್ ನ ಬಗ್ಗೆ ವಿವರಣೆ ನೀಡಿದ ನಗರಸಭೆಯ ಅಧ್ಯಕ್ಷರಾದ ಸುಮಿತ್ರ ನಾಯಕ್ ಅವರು, ಈಗಾಗಲೇ ಸರಕಾರ ಮಟ್ಟದಲ್ಲಿ ರೂ. 338 ಕೋಟಿ ಮೊತ್ತದ ಯುಜಿಡಿ ಮತ್ತು ಎಸ್‌ಟಿಪಿ ಕಾಮಗಾರಿ ಯೋಜನೆ ಅನುಮೋದನೆ ಸಿಕ್ಕಿದ್ದು, ಅನುದಾನ ಬಿಡುಗಡೆಯಾದ ಮೇಲೆ ಈ ವ್ಯವಸ್ಥೆ ಸುಧಾರಣೆಯಾಗುವ ಸಾಧ್ಯತೆ ಇದೆ ಎಂದರು.
ಇನ್ನು ಮಳೆಗಾಲದಲ್ಲಿ ವಾರಾಹಿ ಕಾಮಗಾರಿಗೆ ಸಂಬಂಧ ಪಟ್ಟಂತೆ, ಅಲ್ಲಲ್ಲಿ ಬಿಟ್ಟಿರುವ ರಸ್ತೆ ರಿಪೇರಿ, ಗುಂಡಿ ಮುಚ್ಚುವುದು, ಪ್ಯಾಚ್ ವರ್ಕ್, ಇಂಟರ್ ಲಾಕ್ಸ್ ಇಡುವುಂತಹ ಕೆಲಸಗಳನ್ನು ಇಲಾಖೆ ಬಿಟ್ಟಿದ್ದು ನಗರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್ ನಲ್ಲಿ ಆಗುತ್ತಿರುವ ಸಮಸ್ಯೆಯನ್ನು ಮುಂದಿಟ್ಟು ಸದಸ್ಯರಾದ ರಮೇಶ ಕಾಂಚನ್, ಗಿರೀಶ್ ಅಂಚನ್ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಿಎಂಸಿಯ ಎಡಬ್ಲ್ಯೂ ಯಶವಂತ ಪ್ರಭು, ಲಕ್ಷ್ಮಿ ಮಂಜುನಾಥ್ ಉಪಸ್ಥಿತರಿದ್ದರು.
ನೋಡಿ ಭಟ್ರೆ ನಿಮ್ಮನ್ನು ಗೆಲ್ಲಿಸಿದ್ದು ಜನ ಅಧಿಕಾರಿಗಳನ್ನು ಗೆಲ್ಲಿಸಿದ್ದು ನಾವಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೆಲಸ ಮಾಡುವಂತ ಜವಾಬ್ದಾರಿ ನಿಮ್ಮದು ಎಲ್ಲಾ ಸರಕಾರದಲ್ಲಿ ಅಧಿಕಾರಿ ಇವತ್ತು ಒಬ್ಬ ನಾಳೆ ಒಬ್ಬ ಅಂತ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ನಿಮ್ಮ ಅವಧಿಯಲ್ಲಿ ದೂರು ವಂತ ಪ್ರಶ್ನೆ ಬರಬಾರದು