ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಸವದಿ, ಹೇಮಲತಾ, ಕೇಶವ ಪ್ರಸಾದ್, ಚಲವಾದಿ ನಾರಾಯಣಗೆ ಟಿಕೆಟ್

ಬೆಂಗಳೂರು ಮೇ 24: ಕೊನೆಗೂ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ.
ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಹೇಮಲತಾ ನಾಯಕ್, ಕೇಶವ ಪ್ರಸಾದ್ ಮತ್ತು ಚಲವಾದಿ ನಾರಾಯಣ ಸ್ವಾಮಿಗೆ ಟಿಕೆಟ್ ಅಂತಿಮ ಮಾಡಲಾಗಿದೆ. ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಸವರಾಜ ಹೊರಟ್ಟಿಯವರಿಗೆ ಟಿಕೆಟ್ ನೀಡಲಾಗಿದೆ.

ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದ್ದು, ಇದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಮೂಲಗಳ ಪ್ರಕಾರ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ ಆರೋಪಕ್ಕೆ ತುತ್ತಾಗುವ ಆತಂಕದಿಂದ   ಬಿಜೆಪಿ ವರಿಷ್ಠರು ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಪಕ್ಷದ ನಿರ್ಧಾರ ಗೌರವಿಸಿ, ಸೌಜನ್ಯದಿಂದ ವರ್ತಿಸಿ: ಬೆಂಬಲಿಗರಿಗೆ ಬಿಎಸ್‌ವೈ ಪುತ್ರ ವಿಜಯೇಂದ್ರ ಮನವಿ: ವಿಧಾನಸಭೆಯಿಂದ ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ, ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನವೇ ಅಂತಿಮವಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಂಗಳವಾರ ಹೇಳಿದ್ದಾರೆ.

ಪಕ್ಷದ ನಿರ್ಧಾರ ಗೌರವಿಸಿ, ಸೌಜನ್ಯದಿಂದ ವರ್ತಿಸುವಂತೆ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳಿಗೆ ವಿಜಯೇಂದ್ರ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಪಕ್ಷದ ಈ ನಿರ್ಧಾರವನ್ನು ಅನುಸರಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಮತ್ತು ಇತರೆಡೆ ಅನಗತ್ಯ ಕಾಮೆಂಟ್‌ಗಳನ್ನು ಮಾಡದಂತೆ ಮನವಿ ಮಾಡಿದ್ದು, ಇದು ಪಕ್ಷದ ಪ್ರತಿಷ್ಠೆಗೆ ಮಾತ್ರವಲ್ಲದೆ ಯಡಿಯೂರಪ್ಪ ಹಾಗೂ ತಮ್ಮ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ನಾನು ರಾಜಕೀಯಕ್ಕೆ ಬಂದಾಗಿನಿಂದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷನಾಗಿ ಕೆಲಸ ಮಾಡುವ ಅವಕಾಶವನ್ನು ನೀಡುವ ಮೂಲಕ ಪಕ್ಷ ಮತ್ತು ನಮ್ಮ ನಾಯಕರು ಯಾವಾಗಲೂ ನನಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿ ನಿಂತಿದ್ದಾರೆ. ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನಮಾನವೇ ಅಂತಿಮವಲ್ಲ ಎಂಬುದನ್ನು ಅರ್ಥಮಾಡಿ ಕೊಳ್ಳಬೇಕು ಎಂದು ಎಲ್ಲಾ ಕಾರ್ಯಕರ್ತರು ಮತ್ತು ನನ್ನ ಬೆಂಬಲಿಗರಲ್ಲಿ ಮನವಿ ಮಾಡುತ್ತೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ಸಾಮರ್ಥ್ಯ ಇರುವವರನ್ನು ಪಕ್ಷ ಎಂದಿಗೂ ಕೈಬಿಟ್ಟಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಹನೆ, ಸೌಜನ್ಯದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲ, ಸಹಕಾರ ಸದಾ ಇರಲಿ‘ ಎಂದು ವಿನಂತಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!