| ನವದೆಹಲಿ ಮೇ 24 : ಉಕ್ರೇನ್ ಮತ್ತು ರಷ್ಯಾ ಯುದ್ಧದ ಬೆನ್ನಲ್ಲೇ ಇದೀಗ ಚೀನ ತನ್ನ ನೆರೆಯ ರಾಷ್ಟ್ರ ತೈವಾನನ್ನು ತನ್ನ ವಶಕ್ಕೆ ಪಡೆಯಲು ಸಂಚು ರೂಪಿಸುತ್ತಿದೆಯಾ ಎಂಬ ಅನುಮಾನ ಎದ್ದಿದೆ. ಇದಕ್ಕೆ ಕಾರಣ ಚೀನದ ಕಮ್ಯುನಿಸ್ಟ್ ಪಕ್ಷ ಹಾಗೂ ಅಲ್ಲಿನ ಸೇನಾ ನಾಯಕರ ನಡುವಿನ ಮಾತುಕತೆ ಎನ್ನಲಾದ ಅನಧಿಕೃತ ಧ್ವನಿಮುದ್ರಿಕೆ ಒಳಗೊಂಡಿರುವ ವಿಷಯಗಳು. ಲುಡೆ ಮೀಡಿಯಾ ಎಂಬ ಯೂಟ್ಯೂಬ್ ವಾಹಿನಿಯಲ್ಲೂ ಪ್ರಕಟವಾದ 57 ನಿಮಿಷದ ಧ್ವನಿಮುದ್ರಿಕೆಯನ್ನು ಚೀನ ಮೂಲದ ಮಾನವ ಹಕ್ಕು ಹೋರಾಟ ಜೆನಿಫರ್ ಜೆಂಗ್ ಅವರು ತಮ್ಮ ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಈ ಧ್ವನಿ ಮುದ್ರಿಕೆಯಲ್ಲಿ ತೈವಾನ್ ವಿರುದ್ಧ ಯುದ್ಧ ಸಾರುವ ಮಾತುಕತೆಗಳು ನಡೆದಿವೆ.
ಯುದ್ಧ ಸಾರಲು ಗ್ವಾಂಗ್ ಡಾಂಗ್ ನಲ್ಲಿ 1.40 ಲಕ್ಷ ಯೋಧರು, 953 ಹಡಗುಗಳು, 1653 ಡ್ರೋನ್ಗಳು, 20 ವಿಮಾನ ನಿಲ್ದಾಣಗಳು, ಬಂದರುಗಳು, 6 ಹಡಗು ನಿರ್ಮಾಣ ಕೇಂದ್ರಗಳು ಸಿದ್ಧ ಇವೆ ಎಂಬರ್ಥದ ಮಾಹಿತಿಗಳು ಇವೆ. ಇದನ್ನು ಕಮ್ಯುನಿಸ್ಟ್ ಪಕ್ಷದ ನಾಯಕರೊಬ್ಬರು ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ. ಕ್ವಾಡ್ ಶೃಂಗಕ್ಕೆಂದು ಜಪಾನ್ಗೆ ತೆರಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಬೆಳವಣಿಗೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಒಂದೇ ಚೀನ ನೀತಿಗೆ ನಾವು ಸಹಿಹಾಕಿದ್ದೇವೆ. ಅದಕ್ಕೆ ನಾವು ಬದ್ಧರಾಗಿಯೇ ಇದ್ದೇವೆ. ಆದರೆ ಬಲಾತ್ಕಾರ ದಿಂದ ಚೀನ ಅದನ್ನು ಸಾಧಿಸಲು ಹೊರಟರೆ, ಅಮೆರಿಕ ಥೈವಾನ್ ಪರ ಹೋರಾಡಲಿದೆ ಎಂದು ನೇರವಾಗಿ ಬೈಡೆನ್ ಚೀನಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ವಿಚಾರವಾಗಿ, ಚೀನ ಇತಿಹಾಸದಲ್ಲೇ ಹೀಗೊಂದು ಧ್ವನಿಮುದ್ರಿಕೆ ಸೋರಿಕೆಯಾಗಿದ್ದೇ ಇಲ್ಲ. ಇದರಲ್ಲಿ ಚೀನ ಕಮ್ಯುನಿಸ್ಟ್ ಪಕ್ಷದ ಗ್ವಾಂಗ್ ಡಾಂಗ್ ಪ್ರಾಂತ್ಯದ ನಾಯಕರು, ಆ ಭಾಗದ ಸೇನಾ ಮುಖಂಡರು ಪಾಲ್ಗೊಂಡಿದ್ದಾರೆಂದು ಹೇಳಲಾಗಿದೆ. | |