ಮಾದಕ ವಸ್ತು ಸೇವನೆ ಉದ್ಯಾವರ ಮತ್ತು ಕಾರ್ಕಳದ ಯುವಕರಿಬ್ಬರ ಬಂಧನ
ಉಡುಪಿ ಮೇ 24(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆಯ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉದ್ಯಾವರದ ಸಂಪಿಗೆ ನಗರ ನಿವಾಸಿ ದೀಪಕ್ ರೈ (22), ಕಾರ್ಕಳದ ಹಿಸ್ಮಾರುವಿನ ಮೊಹಮ್ಮದ್ ಇರ್ಷಾದ್ (25) ಪೊಲೀಸರು ವಶಕ್ಕೆ ಪಡೆದವರು.ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಾರಾಯಣ ಹಾಗೂ ಲಕ್ಷ್ಮಣ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಮಾದಕ ವಸ್ತು ಸೇವಿಸಿರುವ ಸಂಶಯದ ಮೇರೆಗೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ದೀಪಕ್ ರೈ ಹಾಗೂ ಸರ್ವೀಸ್ ಬಸ್ ನಿಲ್ದಾಣದಲ್ಲಿ ಮೊಹಮ್ಮದ್ ಇರ್ಷಾದ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಇಬ್ಬರು ಯುವಕರು ಮಾದಕ ವಸ್ತು ಸೇವಿಸಿರುವುದನ್ನು ಖಚಿತಪಡಿಸಲು ಪೊಲೀಸರು ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಇಬ್ಬರ ಪರೀಕ್ಷಾ ವರದಿ ಲಭಿಸಿದ್ದು ಮಾದಕ ವಸ್ತು ಸೇವಿಸಿರುವುದು ಧೃಡ ಪಟ್ಟಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.