ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಬಂಟಕಲ್ಲಿನ ಕಲಾವಿದೆ
ಬಂಟಕಲ್ಲು: ಇಲ್ಲಿನ 92ನೇ ಹೇರೂರಿನ ಯುವ ಕಲಾವಿದೆ ಕು.ಪ್ರಿಯಾಂಕಾ ಆಚಾರ್ಯ ಅವರು 2022ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅವರು ಸ್ಟ್ರಿಂಗ್ ಆರ್ಟ್ ಮೂಲಕ ರಚಿಸಿರುವ 37.5×38 ಇಂಚಿನ ವಿರಾಟ್ ವಿಶ್ವಕರ್ಮ ಕಲಾಕೃತಿಗಾಗಿ ಈ ಗೌರವ ದೊರಕಿದೆ. ಈ ಹಿಂದೆ ಬಂಟಕಲ್ಲು ಶ್ರೀದುರ್ಗಾ ಮಹಿಳಾ ಚೆಂಡೆ ಬಳಗದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರಿಗೆ ತಾನು ರಚಿಸಿದ ಕಲಾಕೃತಿಯನ್ನು ನೀಡುವ ಮೂಲಕ ಪ್ರಿಯಾಂಕ ಆ ಮೇರು ಕಲಾವಿದನ ಮೆಚ್ಚುಗೆ ಗಳಿಸಿದ್ದರು.
ರಂಗೋಲಿ ಬಿಡಿಸುವುದು, ಚಿತ್ರ ಬಿಡಿಸುವುದು ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಈಕೆ ಇದೀಗ ತನ್ನ ಸ್ಟ್ರಿಂಗ್ ಆರ್ಟ್ ಮೂಲಕ ಗಮನ ಸೆಳೆದಿದ್ದಾರೆ. ಬಿಸಿಎ ಪದವೀಧರೆಯಾಗಿದ್ದು ಸದ್ಯ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಪ್ರಿಯಾಂಕಾ ಆಚಾರ್ಯ ಅವರು ಪಡುಬೆಳ್ಳೆಯ ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ಇನ್ನಂಜೆಯ ಎಸ್ ವಿ ಹೆಚ್ ಹಾಗೂ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದಿರುತ್ತಾರೆ.