ಸ್ವ-ಉದ್ಯೋಗದಿಂದ ನಿರುದ್ಯೋಗ ನಿವಾರಣೆ: ಉಡುಪಿ ಉಸ್ತುವಾರಿ ಸಚಿವ ಅಂಗಾರ

ಉಡುಪಿ, ಮೇ 23: ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಸ್ವ-ಉದ್ಯೋಗದ ಅವಶ್ಯಕತೆ ಇದೆ. ಜನರು ಸ್ವಾವಲಂಭಿಗಳಾಗಿ, ಆರ್ಥಿಕವಾಗಿ ಸಬಲರಾದಲ್ಲಿ ದೇಶದ ಆರ್ಥಿಕತೆಯಲ್ಲಿ ಕೂಡ ಯಶಸ್ಸನ್ನು ಕಾಣಬಹುದು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು.

ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇಲಾಖೆ ಇವರ ಸಹಯೋಗದಲ್ಲಿ ನಡೆದ ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀ-ಶಕ್ತಿ ಗುಂಪುಗಳಿಗೆ ಬೀಜಧನ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸ್ತ್ರೀ ಶಕ್ತಿ ಗುಂಪುಗಳು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದು, ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸರಕಾರದಿಂದ ಸಹಾಯಧನ ದೊರಕುತ್ತಿದ್ದು, ಫಲಾನುಭವಿಗಳು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಕರಾವಳಿಯಲ್ಲಿ ಒಳನಾಡು ಮೀನುಗಾರಿಕೆ ಯು ಹೆಚ್ಚು ಆದಾಯವನ್ನು ಉತ್ಪಾದಿಸುವ ಕ್ಷೇತ್ರವಾಗಿದ್ದು, ಇದಕ್ಕೆ ಸರಕಾರ ಕೂಡ ಪ್ರೋತ್ಸಾಹ ನೀಡುತ್ತಿದೆ. ಮೀನಿನ ಗುಣಮಟ್ಟ ಕಾಪಾಡಲು ಕೋಲ್ಡ್ ಸ್ಟೋರೆಜ್ ವ್ಯವಸ್ಥೆ, ಮೀನು ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಹಾಗೂ ಶಿಥಲೀಕರಣ ವಾಹನ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದ್ದು, ಪ್ರಧಾನ ಮಂತ್ರಿ ಮತ್ಸ್ಯಸಂಪಧ ಯೋಜನೆಯ ಮೂಲಕ ಅನೇಕ ರೀತಿಯ ಸಹಾಯವನ್ನು ಸರಕಾರ ಮಾಡುತ್ತಿದೆ ಎಂದರು.

ಸಾರ್ವಜನಿಕರು ಸರಕಾರದಿಂದ ದೊರೆಯುವ ಸಹಾಯವನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ರೀತಿಯ ಸ್ವ-ಉದ್ಯೋಗಗಳನ್ನು ಕೈಗೊಂಡು, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾದಲ್ಲಿ ಪುರುಷ ಮತ್ತು ಮಹಿಳಾ ಸಮಾನತೆ ಮೂಡಲಿದೆ ಎಂದರು. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಸರಕಾರದಿಂದ ವಿವಿಧ ಇಲಾಖೆ, ನಿಗಮಗಳ ಮೂಲಕ ಮಂಜೂರಾಗುವ ಅನೇಕ ಆರ್ಥಿಕ ನೆರವಿನ ಯೋಜನೆಗಳಲ್ಲಿ ಜಿಲ್ಲೆಗೆ ನಿಗಧಿಪಡಿಸಿದ ಗುರಿ ಅತ್ಯಂತ ಕಡಿಮೆ ಇದ್ದು, ಇದು ಹೆಚ್ಚಳವಾಗಬೇಕು. ಫಲಾನುಭವಿಗಳು ಸರಕಾರದಿಂದ ಪಡೆಯುವ ಸಹಾಯ ಧನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಿಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಪೌಷ್ಠಿಕತೆಯಿಂದ ಬಳಲುವ ಅಂಗನವಾಡಿಗೆ ದಾಖಲಾದ ಮಕ್ಕಳಿಗೆ ಸೃಷ್ಠಿ ಹಾಗೂ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಹಾಲು ಮತ್ತು ಮೊಟ್ಟೆಯನ್ನು ಮತ್ತು ಬೈಂದೂರು ತಾಲೂಕಿನ 21, ಕುಂದಾಪುರ ತಾಲೂಕಿನ 6, ಉಡುಪಿಯ 1 ಮತ್ತು ಕಾಪು ವಿನ 24 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ ರೂ. 1 ಲಕ್ಷ ಮೊತ್ತದ ಬೀಜಧನದ ಚೆಕ್ ಅನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!