ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ಇಬ್ಬರು ಅಭ್ಯರ್ಥಿಗಳ ಹೆಸರು ಪ್ರಕಟ
ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿರುವ ಇಬ್ಬರು ಅಭ್ಯರ್ಥಿಗಳ ಹೆಸರು ಸೋಮವಾರ ಪ್ರಕಟವಾಗಿದೆ.
ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಬಿಎಂಟಿಸಿ ಮಾಜಿ ಅಧ್ಯಕ್ಷ ಎಂ.ನಾಗರಾಜು ಯಾದವ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಕಾಂಗ್ರೆಸ್‌ನಿಂದ ಎರಡು ಸ್ಥಾನಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಅಬ್ದುಲ್ ಜಬ್ಬಾರ್ ಅವರು ಈ ಹಿಂದೆ ಪರಿಷತ್ ಸದಸ್ಯರಾಗಿದ್ದರೆ, ಯಾದವ್ ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಟಿಕೆಟ್ ನಿರೀಕ್ಷೆಯಲ್ಲಿದ್ದ ಪಕ್ಷದ ಹಿರಿಯ ಮುಖಂಡ, ಪರಿಷತ್‌ನ ಮಾಜಿ ಸದಸ್ಯ ಎಸ್.ಆರ್. ಪಾಟೀಲ ಅವರಿಗೆ ತೀವ್ರ ನಿರಾಸೆ ಆದಂತಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದೆ.
ಕರ್ನಾಟಕದ ವಿಧಾನಪರಿಷತ್‌ಗೆ ಕಾಂಗ್ರೆಸ್‌ನಿಂದ ಎಂ.ನಾಗರಾಜು ಯಾದವ್ ಮತ್ತು ಕೆ.ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದಿಸಿರುವುದಾಗಿ ಎಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ವಿಧಾನಸಭೆಯ ಬಲಾಬಲದ ಪ್ರಕಾರ ಏಳು ಸ್ಥಾನಗಳ ಪೈಕಿ ಬಿಜೆಪಿ 4, ಕಾಂಗ್ರೆಸ್ 2 ಮತ್ತು ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿವೆ. ಅಭ್ಯರ್ಥಿಗಳಾಗಲು ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳು ಭಾರೀ ಪೈಪೋಟಿ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಇದೆ.
ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರ, ನಿರ್ಮಲ್ ಕುಮಾರ್ ಸುರಾನ, ಛಲವಾದಿ ನಾರಾಯಣಸ್ವಾಮಿ, ಮಹಾಂತೇಶ ಕವಟಗಿಮಠ, ಕೇಶವಪ್ರಸಾದ್, ಅಶ್ವತ್ಥನಾರಾಯಣಗೌಡ, ಭಾನುಪ್ರಕಾಶ್ ಮುಂತಾದವರ ಹೆಸರುಗಳು ಪಟ್ಟಿಯಲ್ಲಿ ಸೇರಿವೆ ಎಂದು ಹೇಳಲಾಗಿದೆ. ವಿಜಯೇಂದ್ರ ಸೇರಿ ಕೆಲವು ಆಕಾಂಕ್ಷಿಗಳು ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದರು. ಆದರೆ, ಬಿಜೆಪಿಯಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ, ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಿದರ್ಶನಗಳೂ ಈ ಹಿಂದೆ ಇವೆ. ಜೆಡಿಎಸ್‌ನಲ್ಲಿ ಟಿ.ಎ.ಶರವಣ, ಕುಪೇಂದ್ರ ರೆಡ್ಡಿ ಸೇರಿ ಇನ್ನೂ ಕೆಲವರು ಪ್ರಯತ್ನ ನಡೆಸಿದ್ದಾರೆ.