ಮಳಲಿ ದರ್ಗಾ ನವೀಕರಣ- ತಾಂಬೂಲ ಪ್ರಶ್ನೆಗೆ ಸಿದ್ಧತೆ
ಮಂಗಳೂರು ಮೇ 23: ಮಳಲಿಯಲ್ಲಿರುವ ದರ್ಗಾವನ್ನು ಇತ್ತೀಚಿಗೆ ನವೀಕರಣಕ್ಕಾಗಿ ಕೆಡವಿದ ವೇಳೆ ದೇವಸ್ಥಾನವನ್ನು ಹೋಲುವ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಈ ಜಾಗದ ಹಿನ್ನೆಲೆ ತಿಳಿಯಲು ಕೇರಳದಿಂದ ಆಗಮಿಸಿದ ತಂತ್ರಿಗಳು ಇಂದು ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವಿಚಾರವನ್ನು ಗಂಬೀರವಾಗಿ ಪರಿಗಣಿಸಿರುವ ವಿಶ್ವ ಹಿಂದೂ ಪರಿಷತ್ ಜಾಗದ ಧಾರ್ಮಿಕ ಹಿನ್ನಲೆ ತಿಳಿಯಲು ಕೇರಳದ ಪ್ರಸಿದ್ಧ ತಂತ್ರಿಗಳಿಂದ ತಾಂಬೂಲ ಪ್ರಶ್ನೆ ಮೊರೆ ಹೋಗಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದ್ದು, ಮೇ 24 ಅಥವಾ ಮೇ 25 ರಂದು ಈ ತಾಂಬೂಲ ಪ್ರಶ್ನೆ ನಡೆಯಲಿದೆ. ಹಾಗೂ ದರ್ಗಾದಲ್ಲಿ ದೇವಸ್ಥಾನ ಹೋಲುವ ರಚನೆ ಪತ್ತೆಯಾದ ಹಿನ್ನೆಲೆ ವಿಶ್ವಹಿಂದೂ ಪರಿಷತ್ ಹೋರಾಟ ಸಂಘಟಿಸಲು ಸಭೆ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರಿನ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ನವೀಕರಣಕ್ಕಾಗಿ ದರ್ಗಾದ ಮುಂಭಾಗವನ್ನು ಕೆಡವಲಾಗಿತ್ತು. ಈ ಸಂದರ್ಭ ಒಳಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ರೀತಿಯ ಮಾದರಿ ಪತ್ತೆಯಾಗಿತ್ತು. ತಕ್ಷಣ ಸ್ಥಳೀಯರು ಹಾಗು ಹಿಂದೂ ಸಂಘಟನೆಗಳು ಜಮಾಯಿಸಿ ಸರ್ಕಾರೀ ಅಧಿಕಾರಿಗಳ ನೇತೃತ್ವದಲ್ಲಿ ನವೀಕರಣ ಕಾರ್ಯ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಲಾಗಿತ್ತು. ದರ್ಗಾವು ಈ ಹಿಂದೆ ಜೈನ ಅಥವಾ ಹಿಂದೂ ದೇವಸ್ಥಾನ ಆಗಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.